800 ಗ್ರಾಂ ಚಿನ್ನ, 70 ಲಕ್ಷದ ಕಾರು ಕೊಟ್ಟರೂ ಸಾಕಾಗಲಿಲ್ಲ…ವರದಕ್ಷಿಣೆ ಕಿರುಕುಳಕ್ಕೆ ನವ ವಿವಾಹಿತೆ ಆತ್ಮಹತ್ಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಸಾವನ್ನಪ್ಪಿದ್ದಾರೆ.

27 ವರ್ಷದ ರಿಧಾನ್ಯಾ ದೇವಸ್ಥಾನಕ್ಕೆ ಹೋಗುತ್ತೇನೆಂದು ಗಂಡನ ಮನೆಯಿಂದ ಕಾರ್​ನಲ್ಲಿ ಹೊರಟು ಕಾರ್​ನಲ್ಲೇ ಕ್ರಿಮಿನಾಶಕ ಸೇವಿಸಿದ್ದಾರೆ.

ಈ ವರ್ಷದ ಏಪ್ರಿಲ್​​ನಲ್ಲಿ ಕವಿನ್ ಕುಮಾರ್ ಜೊತೆಗೆ ರಿಧಾನ್ಯಾ ವಿವಾಹ ನಡೆದಿತ್ತು. ಮದುವೆ ವೇಳೆ 70 ಲಕ್ಷ ರೂಪಾಯಿ ಮೌಲ್ಯದ ವೋಲ್ವೋ ಕಾರು, 800 ಗ್ರಾಂ ಚಿನ್ನವನ್ನು ವರದಕ್ಷಿಣೆ ಆಗಿ ರಿಧಾನ್ಯಾ ತಂದೆ ಅಣ್ಣಾದೊರೈ ಗಂಡನ ಮನೆಯವರಿಗೆ ನೀಡಿದ್ದರು. ಆದರೂ ಗಂಡನ ಮನೆಯಲ್ಲಿ ಇನ್ನೂ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಈ ಮಾನಸಿಕ ಕಿರುಕುಳ ತಾಳಲಾಗದೇ ನವವಿವಾಹಿತೆ ಜೀವ ಕಳೆದುಕೊಂಡಿದ್ದಾರೆ.

ಜೀವ ತೆಗೆದುಕೊಳ್ಳುವುದಕ್ಕೂ ಮೊದಲು ರಿಧಾನ್ಯ ತನ್ನ ತಂದೆ ಅಣ್ಣಾದೊರೈಗೆ 8 ವಾಯ್ಸ್ ಮೆಸೇಜ್ ಕಳಿಸಿದ್ದರು. ಈ ವಾಯ್ಸ್ ಮೇಸೇಜ್​ನಲ್ಲಿ ಗಂಡ ಹಾಗೂ ಅತ್ತೆ, ಮಾವ ಕೊಡುತ್ತಿದ್ದ ಕಿರುಕುಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಜೀವ ಬಿಡುತ್ತಿರುವುದಕ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿ. ಇದರ ಬಗ್ಗೆ ಯಾರಿಗೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ನನ್ನ ಮಾತು ಕೇಳಿದವರು, ಜೀವನ ಇದೇ ರೀತಿ ಇರುತ್ತೆ, ಜೀವನದಲ್ಲಿ ಇವುಗಳ ಬಗ್ಗೆ ರಾಜೀ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ. ಅವರಿಗೆ ನನ್ನ ನೋವು ಅರ್ಥವಾಗಲ್ಲ. ನೀವು ನನ್ನ ಬಗ್ಗೆ ಅನುಮಾನ ಪಡಬಹುದು. ಆದರೇ, ನಾನು ಸುಳ್ಳು ಹೇಳುತ್ತಿಲ್ಲ. ನನ್ನ ಸುತ್ತ ಇರುವವರು ನಟಿಸುತ್ತಿದ್ದಾರೆ. ನಾನೇಕೆ ಮೌನವಾಗಿದ್ದೇನೆ ಎಂದು ನನಗೆ ಅರ್ಥವಾಗುತ್ತಿಲ್ಲ ಅಥವಾ ನಾನೇಕೆ ಈ ರೀತಿ ಇದ್ದೇನೆ. ನನ್ನ ಜೀವನ ಪೂರ್ತಿ ನಾನು ನಿಮಗೆ ಹೊರೆಯಾಗಲ್ಲ. ನಾನು ಈ ಭಾರಿ ಯಾವುದೇ ತಪ್ಪು ಮಾಡಲ್ಲ. ಈ ಜೀವನವನ್ನು ನಾನು ಇಷ್ಟಪಡಲ್ಲ. ಗಂಡ ಕವಿನ್ ಕುಮಾರ್ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ತಂದೆ ಅಣ್ಣಾದೊರೆೈಗೆ ಕಳಿಸಿದ ವಾಯ್ಸ್ ಮೇಸೇಜ್​​​ಗಳಲ್ಲಿ ಇದೆ ಎಂದು ಹೇಳಲಾಗಿದೆ.

ಮಂಡಿಪಾಳ್ಯ ಬಳಿಯ ದೇವಸ್ಥಾನ ರಸ್ತೆ ಪಕ್ಕದಲ್ಲೇ ಕಾರ್ ನಿಲ್ಲಿಸಿ, ಕಾರ್​ನಲ್ಲಿ ಕ್ರಿಮಿನಾಶಕ ಸೇವಿಸಿ ಜೀವ ಬಿಟ್ಟಿದ್ದಾರೆ. ಸ್ಥಳೀಯರು ರಸ್ತೆ ಪಕ್ಕ ಕಾರ್ ಬಹಳ ಹೊತ್ತು ನಿಂತಿರುವುದನ್ನು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪೊಲೀಸರು ಬಂದು ಕಾರ್ ಅನ್ನು ಪರಿಶೀಲಿಸಿದಾಗ, ರಿಧಾನ್ಯಾ ಕ್ರಿಮಿನಾಶಕ ಸೇವಿಸಿರುವುದು ಬೆಳಕಿಗೆ ಬಂದಿದೆ.

ಈಗ ಪತಿ, ಅತ್ತೆ, ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಬಿಎನ್‌ಎಸ್ ಕಾಯಿದೆಯ ಸೆಕ್ಷನ್ 85ರಡಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ ಪತಿ ಕವಿನ್ ಕುಮಾರ್, ಮಾವ ಈಶ್ವರ ಮೂರ್ತಿ, ಅತ್ತೆ ಚಿತ್ರಾದೇವಿಯನ್ನು ಪೊಲೀಸರು ಬಂಧಿಸಿದ್ದಾರೆ. ರಿಧಾನ್ಯಾ ತಂದೆ ಅಣ್ಣಾದೊರೈ ಗಾರ್ಮೆಂಟ್ಸ್ ಫ್ಯಾಕ್ಟರಿಯ ಮಾಲೀಕರು ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!