ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿರುವ ಗಿಲ್ಲಿ ನಟ ಅವರು ಈಗ ಕರ್ನಾಟಕದ ಮನೆಮಾತಾಗಿದ್ದಾರೆ. ಕೇವಲ ರಾಜ್ಯದಲ್ಲಷ್ಟೇ ಅಲ್ಲದೆ ನೆರೆರಾಜ್ಯಗಳಲ್ಲೂ ಅವರ ಹವಾ ಜೋರಾಗಿದ್ದು, ಅವರ ರೀಲ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆದರೆ, ಇವೆಲ್ಲಕ್ಕಿಂತ ಹೆಚ್ಚಾಗಿ ಅವರು ಈಗ ಅಭಿಮಾನಿಗಳ ಮನಗೆದ್ದಿರುವುದು ತಮ್ಮ ಸಹ-ಸ್ಪರ್ಧಿಗಳ ವಿರುದ್ಧ ಅವರು ತೋರಿಸುತ್ತಿರುವ ಸೌಜನ್ಯಕ್ಕೆ.
ಬಿಗ್ ಬಾಸ್ ಮನೆಯೊಳಗೆ ಟಾಸ್ಕ್ ಹಠ, ನಾಮಿನೇಷನ್ ಕಿತ್ತಾಟ ಮತ್ತು ವಾಗ್ವಾದಗಳು ಸಹಜ. ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಡಾಗ್ ಸತೀಶ್ ಅವರು ಹೊರಬಂದ ಮೇಲೆ ಗಿಲ್ಲಿ ಗೆಲುವಿನ ಬಗ್ಗೆ ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಕೆಲ ನೆಗೆಟಿವ್ ಹೇಳಿಕೆಗಳನ್ನು ನೀಡಿದ್ದರು. ಆದರೆ, ಈ ಯಾವುದನ್ನೂ ಗಿಲ್ಲಿ ನಟ ಅವರು ಮನಸ್ಸಿಗೆ ಹಚ್ಚಿಕೊಂಡಿಲ್ಲ. “ನನಗೆ ಯಾರ ಮೇಲೂ ಕಿಂಚಿತ್ತೂ ದ್ವೇಷವಿಲ್ಲ, ಅದೆಲ್ಲವೂ ಆಟಕ್ಕೆ ಸೀಮಿತ” ಎನ್ನುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಮೆರೆದಿದ್ದಾರೆ.
ಗಿಲ್ಲಿಯ ಈ ನಿಷ್ಕಲ್ಮಶ ನಡವಳಿಕೆಯನ್ನು ಕಂಡ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಾರೈಕೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. “ನಿನ್ನ ಮನಸ್ಸು ಎಷ್ಟು ಪರಿಶುದ್ಧವಾಗಿದೆಯೋ ಅಷ್ಟು ಚೆನ್ನಾಗಿ ನೀನು ಬದುಕುತ್ತೀಯ” ಎಂದು ಕಮೆಂಟ್ ಮಾಡುವ ಮೂಲಕ ಅವರನ್ನು ಬೆಂಬಲಿಸುತ್ತಿದ್ದಾರೆ. ಸದ್ಯ ಗಿಲ್ಲಿ ನಟ ಅವರು ಮಾಧ್ಯಮ ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದು, ಅನೇಕ ಗಣ್ಯರು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.



