ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟಿಷ್ ಪ್ರಜೆ ಬೋಸ್ಟಿವ್ ಎಲ್ಲಿಸ್ ಆಯಂಡರ್‌ಡೆನ್ ಎಂಬುವರ ತೋಟದಿಂದ 185 ಮಾವಿನಕಾಯಿಗಳನ್ನು ಕದ್ದಿದ್ದ ಎಂಜಲೋ ಅಲ್ವಾರಸ್ ಹಾಗೂ ಇತರರಿಗೆ ನ್ಯಾಯಾಲಯ ಆರೋಪ ಸಾಬೀತಾದರೂ ಶಿಕ್ಷೆ ನೀಡದೆ ಬಿಡುಗಡೆ ಮಾಡಿದೆ!
ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 379/009 ಅಡಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ಟಿ.ಎ. ಫರ್ನಾಂಡೀಸ್ ಅವರು, ಮಾವಿನ ಕಾಯಿ ಕದ್ದ ಆರೋಪ ಸಾಬೀತಾಗಿದ್ದು, ನಾಲ್ವರಿಗೆ ಶಿಕ್ಷೆ ವಿಧಿಸುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಅಪರಾಧಿಗಳು ಯುವಕರಾಗಿದ್ದಾರೆ. ಅವರು ಈ ಹಿಂದೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಇದನ್ನು ಗಮನಿಸಿ ಅವರಿಗೆ ಜೈಲು ಶಿಕ್ಷೆ ವಿಧಿಸದೇ ಅವರನ್ನು ಬಿಡುಗಡೆ ಮಾಡಲು ಆದೇಶಿಸುತ್ತೇನೆ. ಅವರು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಆದೇಶ ನೀಡಿ ಪ್ರಕರಣ ಕೊನೆಗೊಳಿಸಿದ್ದಾರೆ.
ಸುದ್ದಿ ಗೊಂದಲವಾಗಿದೆಯೇ?
ಇದು ಇಂದಿನ ಪ್ರಕರಣವಲ್ಲ, ಇಂದಿಗೆ ಸರಿಯಾಗಿ ನೂರು ವರ್ಷ ಹಿಂದಿನದ್ದು. 1924ರ ಜುಲೈ 5ರಂದು ಈ ಆದೇಶ ನೀಡಲಾಗಿತ್ತು. ಈ ಆದೇಶದ ಪ್ರತಿಯೊಂದು ಈಗ ಕಣ್ಣಿಗೆ ಬಿದ್ದಿದೆ. ವಕೀಲರಾದ ಪುನೀತ್ ಮಹಿಮಾಕರ್ ಎಂಬವರು ತಮ್ಮ ಬಾಡಿಗೆ ಮನೆಯಿಂದ ಸ್ಥಳಾಂತರಗೊಳ್ಳುವಾಗ ಮನೆಯ ಅಟ್ಟದ ಮೇಲಿದ್ದ ಚೀಲವೊಂದನ್ನು ಪರಿಶೀಲಿಸಿದ ವೇಳೆ ಈ ಅಪರೂಪದ ಆದೇಶ ಪತ್ರ ಸಿಕ್ಕಿದೆ. ಅವರು ಇದನ್ನು ಪಿಟಿಐ ಸುದ್ದಿ ಸಂಸ್ಥೆ ಜೊತೆಗೆ ಹಂಚಿಕೊಂಡಿದ್ದಾರೆ. ಜೊತೆಗೆ ನ್ಯಾಯಾಧೀಶ ಟಿ.ಎ. ಫರ್ನಾಂಡೀಸ್ ಅವರ ಈ ಆದೇಶ ಪ್ರತಿಯನ್ನು ಸಂರಕ್ಷಿಸಿ ಇಡುತ್ತೇನೆ ಎಂದು ಕೂಡಾ ಹೇಳಿದ್ದಾರೆ.