ಪ್ರತಿ ಜಿಲ್ಲೆಗೊಂದು ಕ್ಯಾನ್ಸರ್ ಆಸ್ಪತ್ರೆ ಅವಶ್ಯ: ಸಚಿವ ಡಾ.ಶರಣಪ್ರಕಾಶ ಪಾಟೀಲ್

ಹೊಸದಿಗಂತ ವರದಿ, ಶಿವಮೊಗ್ಗ:

ಪ್ರತಿ ಜಿಲ್ಲೆಗೊಂದು ಕ್ಯಾನ್ಸರ್ ಆಸ್ಪತ್ರೆ ಅವಶ್ಯಕತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ ಸಹಯೋಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಕ್ಯಾನ್ಸರ್ ಚಿಕಿತ್ಸೆ ಇಲ್ಲಿಯೇ ದೊರೆಯುವಂತೆ ಮಾಡಲಾಗುವುದು. 120 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಇದಾಗಲಿದೆ. ಶಿವಮೊಗ್ಗ ಸುತ್ತಮುತ್ತಲ ಜನರಿಗೆ ಇದರಿಂದ ಉಪಯೋಗ ಆಗಲಿದೆ. ಕೀಮೋ ಥೆರಪಿ, ರೇಡಿಯೋ ಥೆರಪಿ ಸೇರಿದಂತೆ ಎಲ್ಲಾ ರೀತಿಯ ಚಿಕಿತ್ಸೆ ದೊರೆಯುವಂತೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಮಧ್ಯ ಕರ್ನಾಟಕದ ರೋಗಿಗಳು ಹಲವು ಚಿಕಿತ್ಸೆಗಳಿಗಾಗಿ ಮಂಗಳೂರು ಇಲ್ಲವೇ ದಾವಣಗೆರೆಗೆ ಹೋಗುತ್ತಿದ್ದಾರೆ. ಎರಡೂ ಕಡೆ ಖಾಸಗಿ ಆಸ್ಪತ್ರೆಗಳು ಮಾತ್ರ ಸಿಗುತ್ತವೆ. ಶಿವಮೊಗ್ಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕೆಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕನಸು ಕಂಡಿದ್ದರು. ಆದರೆ ಆಗ ಆರಂಭ ಆಗಲಿಲ್ಲ ಎಂದರು.
ಇಲ್ಲಿ ಹೃದ್ರೋಗ ಘಟಕ ಇದೆ. ಕೇವಲ ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು. ಇಲ್ಲಿನ ವ್ಯವಸ್ಥೆ ಸುಧಾರಣೆಗೆ ಪ್ರಯತ್ನ ಮಾಡಲಾಗುವುದು ಎಂದರು.
ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಸಂಗಮೇಶ್, ಚನ್ನಬಸಪ್ಪ, ಜಿಲ್ಲಾಕಾರಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಸು‘ಾಕರ ಲೋಖಂಡೆ, ಎಸ್ಪಿ ಮಿಥುನ್‌ಕುಮಾರ್ ಇನ್ನಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!