ಪ್ರತಿಯೊಂದು ಭಾಷೆಯೂ ದೇಶದ ಸಂಪತ್ತು, ಯಾರು ಜನರ ಮೇಲೆ ಹಿಂದಿ ಹೇರುತ್ತಿಲ್ಲ: ಅಮಿತ್‌ ಶಾ ಖಡಕ್ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರಕಾರ ಯಾವುದೇ ಭಾಷೆ ಅಥವಾ ರಾಜ್ಯದ ಜನರ ಮೇಲೆ ಹಿಂದಿ ಹೇರುತ್ತಿಲ್ಲ. ಬದಲಿಗೆ ಭಾಷೆಗಳ ಕುರಿತು ರಾಜಭಾಷಾ ವಿಭಾಗದ (ಅಧಿಕೃತ ಭಾಷಾ ಇಲಾಖೆ – Raajbhasha Vibhaag) ಅಡಿಯಲ್ಲಿ ಹೊಸ ಇಲಾಖೆ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಅಮಿತ್‌ ಶಾ ಅವರು ಹೇಳಿದರು.

ರಾಜ್ಯಸಭೆಯಲ್ಲಿಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿವರಿಸಿರುವ ತ್ರಿಭಾಷಾ ಸೂತ್ರದ ಅನುಷ್ಠಾನದ ಕುರಿತು ತೀವ್ರ ಗದ್ದಲದ ನಡುವೆ ಮಾತನಾಡಿದ ಶಾ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಆರೋಪವನ್ನು ತಳ್ಳಿಹಾಕಿದರು.

ಭಾಷೆಯ ಹೆಸರಿನಲ್ಲಿ ರಾಷ್ಟ್ರದಲ್ಲಿ ಸಾಕಷ್ಟು ವಿಭಜನೆಗಳು ನಡೆದಿವೆ. ಇನ್ಮುಂದೆ ಅದು ಸಂಭವಿಸಬಾರದು. ಪ್ರತಿಯೊಂದು ಭಾಷೆಯೂ ದೇಶದ ಸಂಪತ್ತು. ಹಿಂದಿ ಸಹ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧೆ ಮಾಡುತ್ತಿಲ್ಲ. ಅದು ಇತರ ಭಾಷೆಗಳ ಸ್ನೇಹಿತನಿದ್ದಂತೆ ಎಂದು ಹೇಳಿದರು.

ಭಾರತೀಯ ಭಾಷೆಗಳು ಈ ದೇಶದ ಸಂಪತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಎಲ್ಲಾ ಭಾಷೆಗಳನ್ನು ಉತ್ತೇಜಿಸಿ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ಭಾಷೆಗಳ ಇಲಾಖೆಯನ್ನು ತೆರೆಯಲಿದೆ. ಭಾಷೆಗಳ ನಡುವೆ ಭಾಷಾಂತರಕ್ಕೆ ಮೊಬೈಲ್ ಆ್ಯಪ್ ಸಹ ಹೊರತರಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು.

ಕೇಂದ್ರ ಸರ್ಕಾರ ದಕ್ಷಿಣದ ಭಾಷೆಗಳ ವಿರೋಧಿಯಲ್ಲ. ನಾನು ಗುಜರಾತ್‌ನಿಂದ ಬಂದಿದ್ದೇನೆ. ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನಿಂದ ಬಂದಿದ್ದಾರೆ. ಇಲ್ಲಿ ಭಾಷೆ ಮುಖ್ಯವಲ್ಲ, ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ಗಳು ಭಾರತೀಯ ಭಾಷೆಯಲ್ಲಿ ಲಭ್ಯವಾಗಬೇಕು ಎಂಬುದಷ್ಟೇ ಕೇಂದ್ರದ ಉದ್ದೇಶ ಎಂದಿದ್ದಾರೆ.

ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳನ್ನು ತಮಿಳಿನಲ್ಲಿ ನೀಡಲು ತಮಿಳುನಾಡು ಸರ್ಕಾರಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಅವರ ಆರ್ಥಿಕತೆಗೆ ಪೆಟ್ಟು ಬೀಳಲಿದೆ. ಇದನ್ನು ನಾವು ಕಳೆದ ಎರಡು ವರ್ಷಗಳಿಂದ ಹೇಳುತ್ತಿದ್ದೇವೆ. ಆದರೆ ದಕ್ಷಿಣದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ತಮಿಳಿನಲ್ಲೇ ನಾವು ವೃತ್ತಿಪರ ಶಿಕ್ಷಣ ನೀಡಲಿದ್ದೇವೆ ಎಂದು ಅಮಿತ್ ಶಾ ಭರವಸೆ ನೀಡಿದರು.

ತಮ್ಮ ಭ್ರಷ್ಟಾಚಾರ ಮರೆ ಮಾಚಲು ಹಾಗೂ ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ಭಾಷಾ ವಿವಾದವನ್ನು ಹುಟ್ಟುಹಾಕಿವೆ. ಭಾರತೀಯ ಭಾಷೆಗಳನ್ನು ರಕ್ಷಿಸಲು ನಮ್ಮ ಪಕ್ಷ ಬದ್ಧವಾಗಿದೆ. ಈ ಕುರಿತಂತೆ ಡಿಸೆಂಬರ್ ನಂತರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ, ಸಂಸದರು ಮತ್ತು ಆಯಾ ಭಾಷೆಯ ಜನರೊಂದಿಗೆ ಸಮಾಲೋಚನೆ ನಡೆಸುವೆ. ತಮ್ಮ ಭ್ರಷ್ಟಾಚಾರ ಮರೆಮಾಚಲು ಭಾಷೆಯ ಹಿಂದೆ ನಿಂತು ಆಶ್ರಯ ಪಡೆಯುತ್ತಿರುವವರಿಗೆ ಇದು ನನ್ನ ಖಡಕ್ ಎಚ್ಚರಿಕೆ ಎಂದು ಅಮಿತ್‌ ಶಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!