Saturday, October 11, 2025

ಶೀಘ್ರದಲ್ಲೇ ಪೆಟ್ರೋಲ್-ಡೀಸೆಲ್‌ ಕಾರು ದರದಲ್ಲಿ ಇವಿ ಸಿಗುತ್ತೆ: ನಿತಿನ್ ಗಡ್ಕರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬೆಲೆಗೆ ಸಮಾನವಾಗಲಿದೆ ಎಂದು ಘೋಷಿಸಿದ್ದಾರೆ. ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (FICCI) ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲೆಕ್ಟ್ರಿಕ್ ವಾಹನಗಳ ಬಳಕೆ ಭಾರತದ ಆರ್ಥಿಕತೆಗೆ ದೊಡ್ಡ ಬದಲಾವಣೆಯನ್ನು ತರಲಿದೆ ಎಂದು ಅಭಿಪ್ರಾಯಪಟ್ಟರು.

ಗಡ್ಕರಿ ಅವರು, “ನಾನು ಎಲೆಕ್ಟ್ರಿಕ್ ವಾಹನಗಳನ್ನು ಪ್ರಾರಂಭಿಸಿದಾಗ ಬ್ಯಾಟರಿ ಬೆಲೆ ಪ್ರತಿ ಕಿಲೋವ್ಯಾಟ್ ಗಂಟೆಗೆ 150 ಡಾಲರ್ ಇತ್ತು. ಇಂದು ಅದು 55ರಿಂದ 65 ಡಾಲರ್‌ವರೆಗೆ ಇಳಿಕೆಯಾಗಿದೆ. ಈ ಕಾರಣದಿಂದಲೇ ಮುಂದಿನ ಕೆಲವು ತಿಂಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಕಾರು, ಬಸ್‌ಗಳ ಬೆಲೆ ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಸಮಾನವಾಗಲಿದೆ” ಎಂದು ಹೇಳಿದರು.

ಭಾರತವು ಪಳೆಯುಳಿಕೆ ಇಂಧನಗಳ ಆಮದುಗಾಗಿ ವರ್ಷಕ್ಕೆ 22 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತಿದೆ. ಇದು ಆರ್ಥಿಕತೆಗೆ ಭಾರವಾಗಿದ್ದು, ಪರಿಸರ ಮಾಲಿನ್ಯಕ್ಕೂ ಕಾರಣವಾಗಿದೆ. ಇದನ್ನು ತಡೆಯಲು ಎಲೆಕ್ಟ್ರಿಕ್ ವಾಹನಗಳು ಹಾಗೂ ಎಥನಾಲ್, ಸಿಎನ್‌ಜಿ, ಐಸೋಬುಟನಾಲ್ ಬಳಸಿ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಗಡ್ಕರಿ ಹೇಳಿದರು.

ಸಚಿವರು ಕೃಷಿ ಕ್ಷೇತ್ರದಲ್ಲಿಯೂ ಎಲೆಕ್ಟ್ರಿಕ್ ಟ್ರಾಕ್ಟರ್ ಹಾಗೂ ಪರ್ಯಾಯ ಇಂಧನ ಬಳಕೆ ಮಾಡುವ ಎಂಜಿನ್‌ಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಸಲಹೆ ನೀಡಿದರು. ಇದರಿಂದ ಗ್ರಾಮೀಣ ಆದಾಯ ಹೆಚ್ಚುವುದು ಮತ್ತು ಡೀಸೆಲ್ ಅವಲಂಬನೆ ಕಡಿಮೆಯಾಗುವುದು ಎಂದು ಹೇಳಿದರು.

ನಾನು ಸಾರಿಗೆ ಸಚಿವನಾಗುವ ಹೊತ್ತಿಗೆ ಭಾರತದ ಆಟೋಮೊಬೈಲ್ ಉದ್ಯಮದ ಗಾತ್ರ 14 ಲಕ್ಷ ಕೋಟಿ ರೂ. ಇತ್ತು. ಈಗ ಅದು 22 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಅಮೆರಿಕಾ (78 ಲಕ್ಷ ಕೋಟಿ ರೂ.) ಮತ್ತು ಚೀನಾ (47 ಲಕ್ಷ ಕೋಟಿ ರೂ.) ನಂತರ ಭಾರತವು ಮೂರನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

error: Content is protected !!