ಹೊಸದಿಗಂತ ವರದಿ,ಬಳ್ಳಾರಿ:
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಜಿಲ್ಲೆಯ ಕೃಷ್ಣನಗರ ಕ್ಯಾಂಪ್ ನಲ್ಲಿ ಅಭಿಮಾನಿಗಳು ನಾಣ್ಯಗಳಿಂದ ತುಲಾಭಾರ ಮಾಡಿ ಗಮನಸೆಳೆದಿದ್ದಾರೆ.
ಕೃಷ್ಣಾ ನಗರ ಕ್ಯಾಂಪ್ ನಲ್ಲಿ ಶನಿವಾರ ಶ್ರೀ ಅಭಯ ಆಂಜಿನೇಯ ಸ್ವಾಮೀಜಿ ದೇಗುಲದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ವಿವಿಧ ಪೂಜಾ ಸಮಾರಂಭದ ಬಳಿಕ ಅಭಿಮಾನಿಗಳು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ನಾಣ್ಯಗಳಿಂದ ತುಲಾಭಾರ ಮಾಡಿ ಗೌರವಿಸಿದರು. ಈ ವೇಳೆ ಪಂಡಿತರಿಂದ ವಿವಿಧ ಮಂತ್ರ ಘೋಷಗಳು ಮೊಳಗಿದವು.
ಇದಕ್ಕೂ ಮುನ್ನ ದೇಗುಲದಲ್ಲಿ ಲೊಕ ಕಲ್ಯಾಣಾರ್ಥವಾಗಿ ಬೆಳಿಗ್ಗೆ ನಡೆದ ಗಣಪತಿ ಹೋಮ ಹವನದಲ್ಲಿ ಜನಾರ್ಧನ ರೆಡ್ಡಿ ಅವರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು. ಕ್ಯಾಂಪ್ ನ ಜನಾರ್ಧನ ರೆಡ್ಡಿ ಅವರ ಅಭಿಮಾನಿಗಳಾದ ರೈತ ಅಲಪಾಟೆ ಶ್ರೀನಿವಾಸ್ ಸೇರಿದಂತೆ ಇತರರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಜನಾರ್ಧನ ರೆಡ್ಡಿ ಅವರ ದಂಪತಿಗಳು ಗಣಪತಿ ಹೋಮದಲ್ಲಿ ಸುಮಾರು ಎರಡಕ್ಕೂ ಹೆಚ್ಚು ಘಂಟೆಗಳ ಕಾಲ ಕುಳಿತು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನಸೆಳೆದರು.
ಈ ವೇಳೆ ಜನಾರ್ಧನ ರೆಡ್ಡಿ ಅವರೊಂದಿಗೆ ಫೊಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.
ಅಭಿಮಾನಿ ಅಲಪಟೆ ಶ್ರೀನಿವಾಸ್ ಅವರು ಮಾತನಾಡಿ, ಜನಾರ್ದನ ರೆಡ್ಡಿ ಅವರು ಎಲ್ಲ ಆರೋಪಗಳಿಂದ ಮುಕ್ತರಾಗಿ ಹೊರಬರಲಿ, ಮತ್ತೆ ರಾಜಕೀಯದಲ್ಲಿ ಸಕ್ರೀಯರಾಗಿ ಜನಸಾಮಾನ್ಯರ ಸೇವೆ ಮಾಡುವಂತಹ ಶಕ್ತಿಯನ್ನು ದೇವರು ದಯಪಾಲಿಸಲಿ, ಆರೋಗ್ಯ ಆವಿಷ್ಯವನ್ನು ನೀಡಿ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದೇವೆ, ಅವರು ಎಲ್ಲ ಆರೋಪಗಳಿಂದ ಮುಕ್ತರಾಗಿ ಬರವ ವಿಶ್ವಾಸವಿದೆ, ಆ ದಿನಗಳು ದೂರವಿಲ್ಲ ಎಂದು ತಿಳಿಸಿದರು.