ಹೊಸದಿಗಂತ , ಬಳ್ಳಾರಿ:
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಬಿಜೆಪಿಗೆ ಬಂದರೆ ಸ್ವಾಗತಿಸುವೆ, ನಮ್ಮದು ಯಾವುದೇ ತಕರಾರಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಗಾಲಿ ಜನಾರ್ಧನ ರೆಡ್ಡಿ ಅವರ ಬಗ್ಗೆ ನನ್ನೊಂದಿಗೆ ಚರ್ಚಿಸಿದರು, ಈ ವೇಳೆ ನನಗೆ ಅನಿಸಿದ್ದು ಅವರಿಗೆ ತಿಳಿಸಿರುವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಾರ್ಧನ ರೆಡ್ಡಿ ಅವರಿಗೆ ದೊಡ್ಡ ಮಟ್ಟದ ಹೆಸರಿದೆ, ನಮ್ಮ ಭಾಗದಲ್ಲೂ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ, ಅವರು ಪಕ್ಷಕ್ಕೆ ಬಂದರೆ ನಮ್ಮದು ಯಾವುದೇ ತಕರಾರಿಲ್ಲ, ಸ್ವಾಗತಿಸುವೆ ಎಂದು ತಿಳಿಸಿರುವೆ, ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು ಎಂದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಲಹೆ ಕೇಳಿದ್ರು, ನನ್ನ ಅಭಿಪ್ರಾಯ ತಿಳಿಸಿರುವೆ, ಅವರು ಪಕ್ಷಕ್ಕೆ ಬರುವುದರಿಂದ ದೊಡ್ಡ ಲಾಭ ಆಗಲಿದೆ ಎಂದು ತಿಳಿಸಿರುವೆ, ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು, ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು ಎಂದರು.
ಜನಾರ್ಧನ ರೆಡ್ಡಿ ಹಾಗೂ ನಾನು ಇಬ್ಬರು ಸ್ನೇಹಿತರು, ಇದರಲ್ಲಿ ಸಂದೇಹವೇ ಇಲ್ಲ, ರಾಜಕಾರಣ ಬೇರೆ, ಸಂಭಂದಗಳೆ ಬೇರೆ, ಇಲ್ಲಿವರೆಗೂ ನಾವಿಬ್ಬರೂ ಅದೇ ಸ್ನೆಹದಲ್ಲಿದ್ದೇವೆ, ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ತಿಮ್ಮಪ್ಪ ಜೋಳದರಾಶಿ, ಮಾರುತಿ ಪ್ರಸಾದ್ ಸರ್ವಶೇಟ್ಟಿ, ಓಬಳೇಶ್ ಇದ್ದರು.