January16, 2026
Friday, January 16, 2026
spot_img

ನಿಧಿ ಪತ್ತೆಯಾದ ಲಕ್ಕುಂಡಿಯಲ್ಲಿ ಇಂದಿನಿಂದ ಉತ್ಖನನ ಆರಂಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಚಿನ್ನದ ನಿಧಿ ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ಕೇಂದ್ರ ಪುರಾತತ್ವ ಇಲಾಖೆಯ ನೇತೃತ್ವದಲ್ಲಿ ಮತ್ತೊಂದು ಉತ್ಖನನ ಕಾರ್ಯ ಆರಂಭವಾಗಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ ಈ ಉತ್ಖನನವು ಇಂದು ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿದೆ.

ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಅವರು ನೀಡಿರುವ ಮಾಹಿತಿಯಂತೆ, ಕೇಂದ್ರ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ ಟಿ. ಎಂ. ಕೇಶವ್ ನೇತೃತ್ವದಲ್ಲಿ ಈ ಉತ್ಖನನ ನಡೆಯಲಿದೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸಹ ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಗದಗ ಜಿಲ್ಲಾಡಳಿತವು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಈ ಉತ್ಖನನವು ಸುಮಾರು 10 ಅಡಿ ಆಳದವರೆಗೆ ನಡೆಯಲಿದ್ದು, ದೇವಸ್ಥಾನದ ಮುಂದಿನ ಸಿದ್ಧರ ಬಾವಿಗೂ ಸಂಬಂಧಿಸಿದ ದಾಖಲೆಗಳಿವೆ ಎಂಬ ಮಾಹಿತಿ ಇದೆ. ಈ ಹಿಂದೆ ಸಿಂಧೂರ ಲಕ್ಷ್ಮಣ ನಾಟಕದ ಸಂದರ್ಭದಲ್ಲಿ ಗುಂಡಿ ಅಗೆದಾಗ ದೇವಸ್ಥಾನದ ಅವಶೇಷಗಳು ಪತ್ತೆಯಾಗಿದ್ದ ಬಗ್ಗೆಯೂ ಉಲ್ಲೇಖಗಳಿವೆ.

ಲಕ್ಕುಂಡಿಯು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಮುಖ ವಾಣಿಜ್ಯ ನಗರವಾಗಿತ್ತು. ಹಾಗೂ ಟಂಕಸಾಲೆ (ಚಿನ್ನದ ನಾಣ್ಯಗಳ ಕಾರ್ಖಾನೆ) ಹೊಂದಿದ್ದ ಸ್ಥಳ ಎಂದು ಇತಿಹಾಸವು ತಿಳಿಸುತ್ತದೆ. ಇದೇ ಕಾರಣಕ್ಕೆ ದೇವಸ್ಥಾನದ ಬಳಿ ಉತ್ಖನನಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.

ಅಂದಾಜು 300 ವರ್ಷಗಳ ಹಳೆಯ ನಿಧಿ: ಪ್ರಜ್ವಲ್ ರಿತ್ತಿ ಅವರ ಮನೆಯಲ್ಲಿ ನಿಧಿ ಪತ್ತೆಯಾದ ಸ್ಥಳಕ್ಕೂ ಈ ದೇವಸ್ಥಾನಕ್ಕೂ ಕೇವಲ 200 ಮೀಟರ್ ದೂರವಿದೆ. ಇತ್ತೀಚೆಗೆ ಪ್ರಜ್ವಲ್ ರಿತ್ತಿ ಮನೆಯಲ್ಲಿ ಸಿಕ್ಕ ಸುಮಾರು 466 ಗ್ರಾಂ ಚಿನ್ನದ ಆಭರಣಗಳು ಮತ್ತು ಕೆಲವು ತಾಮ್ರದ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಲಾಗಿತ್ತು. ಇದು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಎತ್ತಿ ತೋರಿಸಿದೆ. ಆ ನಿಧಿಯು ಸುಮಾರು 300 ವರ್ಷಗಳ ಹಳೆಯದ್ದು ಎಂದು ಪ್ರಾಥಮಿಕ ಅಂದಾಜುಗಳಿವೆ.

ಈ ಉತ್ಖನನದಿಂದ ಲಕ್ಕುಂಡಿಯ ಟಂಕಸಾಲೆ, ವಾಣಿಜ್ಯ ಚಟುವಟಿಕೆಗಳು ಅಥವಾ ಹೆಚ್ಚಿನ ಪುರಾತನ ಅವಶೇಷಗಳು ಬೆಳಕಿಗೆ ಬರಬಹುದು ಎಂಬ ನಿರೀಕ್ಷೆಯಿದೆ. ಲಕ್ಕುಂಡಿಯು 101 ದೇವಸ್ಥಾನಗಳು ಮತ್ತು 101 ಬಾವಿಗಳಿಗೆ ಹೆಸರಾದ ಐತಿಹಾಸಿಕ ಸ್ಥಳವಾಗಿದೆ. ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರ ಕಾಲದ ಶಿಲ್ಪಕಲೆಯ ಕೇಂದ್ರವಾಗಿದೆ.

Must Read

error: Content is protected !!