March 12, 2026
Thursday, March 12, 2026
spot_img

ಟಾರ್ಗೆಟ್ ರೀಚ್ ಆಗದ ಅಬಕಾರಿ ಇಲಾಖೆ: ಅಕ್ರಮ ಮದ್ಯ ತಡೆಗೆ ‘ಕೈ’ ನಾಯಕರ ಬಿಗಿ ಪಟ್ಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ರಾಜ್ಯದ ಅಬಕಾರಿ ಆದಾಯದ ಕುಸಿತ ಮತ್ತು ಅಕ್ರಮ ಮದ್ಯದ ಹಾವಳಿಯ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎನ್.ಎಸ್. ಬೋಸರಾಜು, ಅಕ್ರಮ ಮದ್ಯ ಮಾರಾಟ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಗೋವಾ ಮತ್ತು ಆಂಧ್ರಪ್ರದೇಶದಿಂದ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿರುವುದರಿಂದ ರಾಜ್ಯದ ಅಬಕಾರಿ ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಸದಸ್ಯ ನಾಗರಾಜ್ ಯಾದವ್ ಆತಂಕ ವ್ಯಕ್ತಪಡಿಸಿದರು. ಗಡಿ ಭಾಗಗಳಲ್ಲಿ ಟಾಸ್ಕ್ ಫೋರ್ಸ್ ಚುರುಕುಗೊಳಿಸುವಂತೆ ಅವರು ಒತ್ತಾಯಿಸಿದರು.

2025ರ ಏಪ್ರಿಲ್‌ನಿಂದ 2026ರ ಫೆಬ್ರವರಿ ಅಂತ್ಯದವರೆಗೆ ಒಟ್ಟು 36,492.47 ಕೋಟಿ ರೂಪಾಯಿ ಅಬಕಾರಿ ತೆರಿಗೆ ಸಂಗ್ರಹವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಆದಾಯ ಸಂಗ್ರಹದಲ್ಲಿ 0.51% ಅಲ್ಪ ಕುಸಿತ ಕಂಡುಬಂದಿದೆ.

ನೆರೆಯ ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆ ಕಡಿಮೆ ಮಾಡಿರುವುದು ಕೂಡ ಕರ್ನಾಟಕದ ಮದ್ಯ ಮಾರಾಟದ ಮೇಲೆ ಹೊಡೆತ ನೀಡಿದೆ.

ಅಕ್ರಮ ಮದ್ಯದ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ. ಗಡಿ ಭಾಗಗಳಲ್ಲಿ ಬಿಗಿ ತಪಾಸಣೆ ನಡೆಸುವ ಮೂಲಕ ರಾಜ್ಯದ ಆದಾಯಕ್ಕೆ ಆಗುತ್ತಿರುವ ನಷ್ಟವನ್ನು ತಡೆಗಟ್ಟಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !