ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾ 3ನೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ (WTC Final) ಅಧಿಕೃತವಾಗಿ ಪ್ರವೇಶಿಸಿದೆ.
ಇನ್ನೂ 2ನೇ ತಂಡವಾಗಿ ಫೈನಲ್ ಪ್ರವೇಶಿಸಲು ಭಾರತ, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಪಾಕಿಸ್ತಾನ ವಿರುದ್ಧದಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 148 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 8 ವಿಕೆಟ್ ಕಳೆದುಕೊಂಡು ರೋಚಕ ಜಯ ದಾಖಲಿಸಿದೆ. ಈ ಮೂಲಕ ಫೈನಲ್‌ಗೆ ನೇರವಾಗಿ ಪ್ರವೇಶ ಪಡೆಯಿತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಈವರೆಗೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಏಳು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮೂರು ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ಡ್ರಾ ಅಂತ್ಯವಾಗಿದೆ.
ಇದೀಗ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಸರಾಸರಿ 66.67 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ 58.89 ಹಾಗೂ ಭಾರತ 55.88 ಸರಾಸರಿ ಅಂಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿವೆ. ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್ ಪಂದ್ಯವನ್ನು ಪ್ರವೇಶಿಸಲು ಆಸೀಸ್ ವಿರುದ್ಧ ಗೆಲುವು ನಿರ್ಣಾಯಕವಾಗಿದೆ.
ಮುಂದಿನ ವರ್ಷ ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ.