ಬಜರಂಗದಳದ ಸಂಚಾಲಕರಿಗೆ ಗಡಿಪಾರು ನೋಟೀಸ್: ವಿಹಿಂಪ‌ ಭಜರಂಗದಳ ತೀವ್ರ ಖಂಡನೆ

ಹೊಸದಿಗಂತ ಪುತ್ತೂರು:

ಪುತ್ತೂರು ಜಿಲ್ಲಾ ಬಜರಂಗದಳದ ಸಂಚಾಲಕ ಭರತ್ ಕುಮಾರ್ ಕುಮ್ಡೇಲ್ ಅವರನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಿ ನೋಟೀಸ್ ನೀಡಿರುವುದನ್ನು ವಿಶ್ವ ಹಿಂದೂ ಪರಿಷದ್-ಬಜರಂಗ ದಳ ತೀವ್ರವಾಗಿ ಖಂಡಿಸಿದೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯದ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕೇವಲ ಹಿಂದೂ ಕಾರ್ಯಕರ್ತರನ್ನು ಮಾತ್ರ ಗುರಿಯಾಗಿರಿಸಿಕೊಂಡು ಅವರನ್ನು ಗಡಿಪಾರು ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದೆ. ಪುತ್ತೂರು ಜಿಲ್ಲಾ ಬಜರಂಗದಳದ ಸಂಚಾಲಕ ಭರತ್ ಕುಮಾರ್ ಕುಮ್ಡೇಲ್ ಅವರನ್ನು ಕೂಡಾ ಗುರಿಯಾಗಿರಿಸಿಕೊಂಡು ಅವರಿಗೆ ನೋಟೀಸ್ ಹೊರಡಿಸಲಾಗಿದೆ.

ರಾಜ್ಯ ಸರಕಾರ ಅವರನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲು ಸಂಚು ಹೂಡಿದೆ ಎಂದು ವಿಶ್ವ ಹಿಂದೂ ಪರಿಷದ್‍ನ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲಲ್ಲಿ ಬಾಂಬ್‍ಗಳನ್ನಿಟ್ಟು ಸ್ಫೋಟಿಸುವ ಭಯೋತ್ಪಾದಕರನ್ನು `ಬ್ರದರ್ಸ್’ ಎಂದು ಕರೆದುಕೊಳ್ಳುವ ಮನಃಸ್ಥಿತಿಯ ಕಾಂಗ್ರೆಸ್ ನಾಯಕರು ದೇಶಭಕ್ತ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗಡಿಪಾರು ಮಾಡುವಂತಹ ಕೆಲಸಕ್ಕೆ ಕೈ ಹಾಕಿದ್ದಾರೆ. ರಾಜ್ಯ ಸರಕಾರದ ಇಂತಹ ಹಿಂದೂ ವಿರೋಧಿ ಧೋರಣೆಯನ್ನು ವಿಶ್ವ ಹಿಂದೂ ಪರಿಷದ್-ಬಜರಂಗ ದಳ ಉಗ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲದೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಸಮಸ್ತ ಹಿಂದೂಗಳು ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠವನ್ನು ಕಲಿಸಲಿದ್ದಾರೆ. ಹಿಂದೂಗಳನ್ನೇ ಗುರಿಯಾಗಿರಿಸಿ ಗಡಿಪಾರು ಮಾಡುವಂತಹ ಸರಕಾರದ ಹೀನ ಮನಃಸ್ಥಿತಿ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಂಘಟನೆಗಳ ಆಕ್ರೋಶ
ಸಮಾಜ ಸೇವೆ ಮತ್ತು ದೇಶ ಭಕ್ತಿಯ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವಂತಹ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿರಿಸಿಕೊಂಡು ಅವರನ್ನು ಗಡಿಪಾರು ಮಾಡುವಂತಹ ದುಸ್ಸಾಹಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಲೋಕಸಭಾ ಚುನಾವಣೆಯನ್ನು ನೆಪವಾಗಿರಿಸಿಕೊಂಡು ಹಿಂದೂ ಸಂಘಟನೆಗಳ ಮೇಲೆ ದಬ್ಬಾಳಿಕೆ ಮಾಡುವಂತಹ ಕಾರ್ಯವನ್ನು ಸರಕಾರ ನಡೆಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ರಾಜ್ಯ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷದ್‍ನ ಪ್ರಾಂತ ಗೋರಕ್ಷಾ ಪ್ರಮುಖ್ ಮುರಲೀಕೃಷ್ಣ ಹಸಂತಡ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!