ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC Election) ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವಂತೆ ಕಾರ್ಯಕಾರಿ ಸಮಿತಿ ಸದಸ್ಯರು, ಕೆಲ ನಿರ್ಮಾಪಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು ನಗರದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್ ಹಾಗೂ ಇನ್ನಿತರ ಪದಾಧಿಕಾರಿಗಳ ಅವಧಿ 2023ರ ಮೇ 25ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಕೂಡಲೇ ಚುನಾವಣೆ ನಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್, ಪ್ರಿಯಾ ಹಾಸನ್, ಎನ್.ಎಂ. ಸುರೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಜೂನ್ 12ಕ್ಕೆ ಕೇಸ್ ಏನು ಆಗುತ್ತದೆ ನೋಡಿಕೊಂಡು ಸಭೆ ಕರೆದು ಚುನಾವಣೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಕಳೆದ ಬಾರಿಯೂ ಎಲೆಕ್ಷನ್ ವಿಚಾರದಲ್ಲೂ ಸಮಸ್ಯೆ ಆಗಿತ್ತು. ಆಡಿಟಿಂಗ್ ಎಲ್ಲಾ ಮಾಡಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ. ಹರೀಶ್ ತಿಳಿಸಿದ್ದಾರೆ.