ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುತ್ತಿದ್ದ ಕ್ಷಣದಲ್ಲೇ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭೀಕರ ದುರಂತವೊಂದು ನಡೆದಿದೆ. ಕುಡಿತ, ನೃತ್ಯ, ಸಂಭ್ರಮದಿಂದ ಗಿಜಿಗುಡುತ್ತಿದ್ದ ರೆಸ್ಟೋರೆಂಟ್ ಒಂದರಲ್ಲಿ ಅಚಾನಕ್ ಸಂಭವಿಸಿದ ಸ್ಫೋಟ, ಹೊಸವರ್ಷದ ವಾತಾವರಣವನ್ನು ಕ್ಷಣಾರ್ಧದಲ್ಲೇ ಶೋಕಕ್ಕೆ ತಿರುಗಿಸಿದೆ.
ಸ್ವಿಟ್ಜರ್‌ಲ್ಯಾಂಡ್‌ನ ಪ್ರಸಿದ್ಧ ಪ್ರವಾಸಿ ತಾಣವಾದ ಕ್ರಾನ್ಸ್–ಮೊಂಟಾನಾದಲ್ಲಿರುವ ಲೆ ಕಾನ್ಸ್ಟೆಲೇಷನ್ ಬಾರ್ ನಲ್ಲಿ ಹೊಸ ವರ್ಷದ ಆಚರಣೆ ವೇಳೆ ಭಾರೀ ಸ್ಫೋಟ ಸಂಭವಿಸಿದೆ. ಈ ಘಟನೆಗೆ ಹಲವರು ಬಲಿಯಾಗಿದ್ದು, ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವು–ನೋವಿನ ನಿಖರ ಸಂಖ್ಯೆ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.
ವಲಾಯಿಸ್ ಕ್ಯಾಂಟನ್ ಪೊಲೀಸರ ಮಾಹಿತಿ ಪ್ರಕಾರ, ಡಿಸೆಂಬರ್ 31ರ ರಾತ್ರಿ ಸುಮಾರು 1:30ರ ವೇಳೆಗೆ ಬಾರ್ ಒಳಗೆ ಒಂದು ಅಥವಾ ಹೆಚ್ಚು ಸ್ಫೋಟಗಳು ಸಂಭವಿಸಿವೆ ಎನ್ನಲಾಗಿದೆ. ಸ್ಫೋಟದ ನಂತರ ಸ್ಥಳದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದವು. ಗಾಯಾಳುಗಳನ್ನು ಆಂಬ್ಯುಲೆನ್ಸ್‌ಗಳ ಮೂಲಕ ಹಾಗೂ ಏರ್-ಗ್ಲೇಸಿಯರ್ಸ್ ಹೆಲಿಕಾಪ್ಟರ್‌ಗಳ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಯಿತು. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಹಲವು ಗಂಟೆಗಳ ಕಾಲ ಶ್ರಮಿಸಿದ್ದಾರೆ.

