ಹೊಸದಿಗಂತ ವರದಿ, ಚಿತ್ರದುರ್ಗ :
ಲಾರಿಯೊಳಗಿನ ಸಿಲಿಂಡರ್‌ಗಳಿಗೆ ಸಿಎನ್‌ಜಿ ಗ್ಯಾಸ್ ತುಂಬುತ್ತಿದ್ದ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ನಗರದ ಹೊಸಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ೧೩ ರಸ್ತೆಯಲ್ಲಿರುವ ಮಹಾನಗರ ಎಂಬ ಹೆಸರಿನ ಗ್ಯಾಸ್ ಬಂಕ್‌ನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಅವಘಡದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಲಾರಿ ಚಾಲಕ ಲಕ್ಷ್ಮಣ (೩೮) ಎಂದು ಗುರುತಿಸಲಾಗಿದೆ. ಸಿಎನ್‌ಜಿ ಗ್ಯಾಸ್ ಬಂಕ್‌ನಲ್ಲಿ ಕೆಲಸ ಮಾಡುವ ಗಂಗಾಧರ ಹಾಗೂ ರಘುರೆಡ್ಡಿ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾವಣಗೆರೆಗೆ ಗ್ಯಾಸ್ ಸಾಗಿಸುವ ಉದ್ದೇಶದಿಂದ ಬುಧವಾರ ರಾತ್ರಿ ೮ ಗಂಟೆ ಸುಮಾರಿನಲ್ಲಿ ಲಾರಿಯಲ್ಲಿನ ಎರಡು ಸಿಲಿಂಡರ್‌ಗೆ ಗ್ಯಾಸ್ ತುಂಬಲಾಗುತ್ತಿತ್ತು. ಲಾರಿಯಲ್ಲಿನ ಒಂದು ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅವಘಡ ಸಂಭವಿಸಿದೆ.
ಸಿಲಿಂಡರ್ ಸ್ಫೋಟದ ರಭಸಕ್ಕೆ ಸಿಲಿಂಡರ್‌ನ ಭಾಗಗಳು ಸುಮಾರು ಮೀಟರ್‌ಗಳಷ್ಟು ದೂರ ಹಾರಿಹೋಗಿ ಬಿದ್ದಿವೆ. ಬಂಕ್‌ನಲ್ಲಿ ರಕ್ಷಣೆಗಾಗಿ ಹಾಕಿದ್ದ ಕಬ್ಬಿಣದ ಸಲಾಕೆಗಳು ಸಿಡಿದು ಗ್ಯಾಸ್ ಬಂಕ್‌ನ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಒಂದರಡು ಸಲಾಕೆ ಹಾಗೂ ಸಿಲಿಂಡರ್‌ನ ಭಾಗಗಳು ಪಕ್ಕದ ಜಮೀನಿಗೆ ಹಾರಿ ಬಿದ್ದಿವೆ. ಬಂಕ್‌ನ ಕಾರ್ಯಾಯಲದ ಪಕ್ಕದಲ್ಲಿ ಹಾಕಿದ್ದ ಗ್ರಿಲ್ ಜಖಂಗೊಂಡಿದೆ.
ಸಿಲಿಂಡರ್ ಸ್ಫೋಟದಿಂದಾಗಿ ಗ್ಯಾಸ್ ತುಂಬಿಸಿಕೊಳ್ಳುತ್ತಿದ್ದ ಲಾರಿ ಜಖಂಗೊಂಡಿದೆ. ಸ್ಫೋಟದ ರಭಸಕ್ಕೆ ಲಾರಿ ಚಾಲಕ ಲಕ್ಷ್ಮಣ ಎಂಬುವರ ತಲೆ ಛಿದ್ರವಾಗಿದೆ. ಕೈ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಾಳು ರಘುರೆಡ್ಡಿಯನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಗಾಧರ್ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಎಸ್.ಎಸ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದಾಗಿ ಪ್ರತಿದಿನದ ಕೆಲಸ ಸ್ಥಗಿತಗೊಂಡಿದೆ. ಇದರಿಂದ ಸುಮಾರು ೨ ಲಕ್ಷ ರೂ. ಮೌಲ್ಯದ ಗ್ಯಾಸ್ ಮಾರಾಟ ನಷ್ಟವಾಗಿದೆ ಎಂದು ಗ್ಯಾಸ್ ಬಂಕ್ ಕೆಲಸಗಾರರು ತಿಳಿಸಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.