2026 ರವರೆಗೆ ಪಿಎಂ ಬೆಳೆ ವಿಮೆ ಯೋಜನೆ ವಿಸ್ತರಣೆ: ಕೇಂದ್ರ ಸಂಪುಟ ಅನುಮೋದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್​ರಚನೆ ಮಾಡಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು 2021-22ರಿಂದ 2025-26ರವರೆಗೆ ಒಟ್ಟಾರೆ 69,515.71 ಕೋಟಿ ರೂ.ಗಳೊಂದಿಗೆ 2025-26ರವರೆಗೆ ಮುಂದುವರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

ದೆಹಲಿಯಲ್ಲಿ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಈ ನಿರ್ಧಾರವು 2025-26 ರವರೆಗೆ ದೇಶಾದ್ಯಂತ ರೈತರಿಗೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆಗಳ ನಾಶದಿಂದ ಬಚಾವಾಗಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ತಂತ್ರಜ್ಞಾನವನ್ನು ಬಳಸಿಕೊಂಡು ಕನಿಷ್ಠ ಶೇ. 30ರಷ್ಟು ತೂಕದೊಂದಿಗೆ ಇಳುವರಿ ಅಂದಾಜಿಗಾಗಿ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. 9 ಪ್ರಮುಖ ರಾಜ್ಯಗಳು ಪ್ರಸ್ತುತ ಇದನ್ನು ಜಾರಿಗೊಳಿಸುತ್ತಿವೆ. ಅವುಗಳೆಂದರೆ, ಆಂಧ್ರ ಪ್ರದೇಶ, ಅಸ್ಸಾಂ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಕರ್ನಾಟಕ. ಉಳಿದ ರಾಜ್ಯಗಳಲ್ಲೂ ಇದನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದರು.

ಈ 2 ಯೋಜನೆಯ ಅನುಷ್ಠಾನದಲ್ಲಿ ದೊಡ್ಡ ಪ್ರಮಾಣದ ತಂತ್ರಜ್ಞಾನ ಬಳಕೆಗೆ ಅನುಕೂಲವಾಗುವಂತೆ 824.77 ಕೋಟಿ ರೂ. ಹಣವನ್ನು ನೀಡಲಾಗುವುದು. ಇದು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಈ ಕಾರ್ಯಕ್ರಮದೊಳಗೆ YESTECH ಮತ್ತು WINDSನಂತಹ ತಾಂತ್ರಿಕ ಉಪಕ್ರಮಗಳನ್ನು ಬೆಂಬಲಿಸಲು ನಿಧಿಯನ್ನು ಬಳಸಲಾಗುತ್ತದೆ. ಇದರ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಅಧ್ಯಯನಗಳನ್ನು ನಡೆಸಲಾಗುತ್ತದೆ.

ಹವಾಮಾನ ಮಾಹಿತಿ ಮತ್ತು ನೆಟ್‌ವರ್ಕ್ ಡೇಟಾ ಸಿಸ್ಟಮ್ಸ್ (WINDS) ಯೋಜನೆಯು ಬ್ಲಾಕ್ ಮಟ್ಟದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರಗಳನ್ನು (AWS) ಮತ್ತು ಪಂಚಾಯತ್ ಮಟ್ಟದಲ್ಲಿ ಸ್ವಯಂಚಾಲಿತ ಮಳೆಮಾಪಕಗಳನ್ನು (ARGs) ಸ್ಥಾಪಿಸಲು ಯೋಜನೆ ರೂಪಿಸಿದೆ. ಹೈಪರ್-ಲೋಕಲ್ ಹವಾಮಾನ ಡೇಟಾವನ್ನು ಸಂಗ್ರಹಿಸಲು ಪ್ರಸ್ತುತ ನೆಟ್‌ವರ್ಕ್ ಸಾಂದ್ರತೆಯನ್ನು ಗಣನೀಯವಾಗಿ ಹೆಚ್ಚಿಸುವುದು WINDSನ ಗುರಿಯಾಗಿದೆ.

ಕೇರಳ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪುದುಚೇರಿ, ಅಸ್ಸಾಂ, ಒಡಿಶಾ, ಕರ್ನಾಟಕ, ಉತ್ತರಾಖಂಡ ಮತ್ತು ರಾಜಸ್ಥಾನ ಸೇರಿದಂತೆ 9 ರಾಜ್ಯಗಳು ಪ್ರಸ್ತುತ ವಿಂಡ್ಸ್ ಅನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯಲ್ಲಿವೆ, ಆದರೆ ಇತರ ರಾಜ್ಯಗಳು ಸಹ ಈ ಉಪಕ್ರಮಕ್ಕೆ ಸೇರಲು ಆಸಕ್ತಿ ತೋರಿಸಿವೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಒಂದು ಸರ್ಕಾರಿ ಪ್ರಾಯೋಜಿತ ಬೆಳೆ ವಿಮಾ ಯೋಜನೆಯಾಗಿದ್ದು ಅದು ಒಂದೇ ವೇದಿಕೆಯಲ್ಲಿ ಅನೇಕ ಪಾರ್ಟನರ್​ಗಳನ್ನು ಒಟ್ಟುಗೂಡಿಸುತ್ತದೆ. ಅನಿರೀಕ್ಷಿತ ಘಟನೆಗಳಿಂದ ಬೆಳೆ ನಷ್ಟ ಅಥವಾ ಹಾನಿಯನ್ನು ಎದುರಿಸುತ್ತಿರುವ ರೈತರಿಗೆ ಹಣಕಾಸಿನ ನೆರವು ನೀಡುವ ಮೂಲಕ ಕೃಷಿ ವಲಯದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಗುರಿಯನ್ನು ಫಸಲ್ ಭಿಮಾ ಯೋಜನೆ ಹೊಂದಿದೆ. ಈ ಯೋಜನೆಯು ರೈತರ ಆದಾಯವನ್ನು ಸ್ಥಿರಗೊಳಿಸುತ್ತದೆ, ನವೀನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುತ್ತದೆ, ಆಹಾರ ಭದ್ರತೆ ಒದಗಿಸುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!