ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಲಿಂಪಿಕ್ಸ್ ಗಾಗಿ ಪ್ಯಾರಿಸ್ ತೆರಳಿರುವ ಭಾರತೀಯ ಕ್ರೀಡಾಪಟುಗಳು ವಿಪರೀತ ತಾಪಮಾನದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಭಾರತೀಯ ಕ್ರೀಡಾ ಪಟುಗಳಿಗಾಗಿ ಕೇಂದ್ರ ಕ್ರೀಡಾ ಸಚಿವಾಲಯ 40 ಎಸಿ ಯಂತ್ರಗಳನ್ನು ಪೂರೈಸಿದೆ.
ತಂಪಾದ ಎಸಿಯ ಗಾಳಿ ಪಡೆಯುತ್ತಿರುವ ಫೋಟೊವನ್ನು ಭಾರತೀಯ ಅಥ್ಲೀಟ್ಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಧನ್ಯವಾದ ತಿಳಿಸಿದ್ದಾರೆ.
ಭಾರತೀಯ ಒಲಿಂಪಿಕ್ ಸಮಿತಿ ಹಾಗೂ ಫ್ರೆಂಚ್ ರಾಯಭಾರ ಕಚೇರಿಯೊಂದಿಗಿನ ಚರ್ಚೆಯ ನಂತರ ಕ್ರೀಡಾ ಗ್ರಾಮಕ್ಕೆ ಸಚಿವಾಲಯವು ಈ ಹವಾನಿಯಂತ್ರಿತ ಸಾಧನವನ್ನು ರವಾನಿಸಿದೆ. ‘ಪ್ಯಾರಿಸ್ನಲ್ಲಿ ತಾಪಮಾನ ಸಹಿಸುವುದು ಕ್ರೀಡಾಪಟುಗಳಿಗೆ ಕಷ್ಟಸಾಧ್ಯವಾಗಿದೆ. ಒಲಿಂಪಿಕ್ಸ್ ನಡೆಯುತ್ತಿರುವ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಾಗಿದೆ’ ಎಂದು ಸಚಿವಾಲಯವು ಹೇಳಿದೆ.
ಒಲಿಂಪಿಕ್ಸ್ ಆರಂಭಕ್ಕೂ ಮೊದಲೇ ಬಹಳಷ್ಟು ದೇಶದ ಕ್ರೀಡಾಪಟುಗಳು ಪ್ಯಾರಿಸ್ ತಾಪಮಾನದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಆದರೆ ಇಂಗಾಲದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಹವಾನಿಯಂತ್ರಿತ ಸಾಧವನ್ನು ತ್ಯಜಿಸಲಾಗಿದೆ ಎಂಬ ಮಾತುಗಳು ಆಯೋಜಕರಿಂದ ಕೇಳಿಬಂದಿದ್ದವು.