September 26, 2026
Saturday, September 26, 2026
spot_img

ದೇವಭೂಮಿಯಲ್ಲಿ ನಡುಕ ಹುಟ್ಟಿಸಿದ ಹವಾಮಾನ ವೈಪರೀತ್ಯ: ಕೇದರನಾಥ, ಬದರಿನಾಥ ಮಾರ್ಗದಲ್ಲಿ 18 ತೀರ್ಥಯಾತ್ರಿಕರ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉತ್ತರಾಖಂಡದಲ್ಲಿ ನಡೆಯುತ್ತಿರುವ ಪವಿತ್ರ ಚಾರ್ ಧಾಮ್ ಯಾತ್ರೆಯಲ್ಲಿ ಕಳೆದ 48 ಗಂಟೆಗಳಲ್ಲಿ ಭಾರಿ ದುರಂತ ಸಂಭವಿಸಿದೆ. ರಾಜ್ಯದಲ್ಲಿ ಉಂಟಾದ ಭೀಕರ ಬಿರುಗಾಳಿ, ರಸ್ತೆ ಅಪಘಾತಗಳು ಹಾಗೂ ಹಠಾತ್ ಹೃದಯಾಘಾತದಂತಹ ತುರ್ತು ಆರೋಗ್ಯ ಸಮಸ್ಯೆಗಳಿಂದಾಗಿ ಒಟ್ಟು 18 ತೀರ್ಥಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಆಘಾತಕಾರಿ ಘಟನೆಯಿಂದಾಗಿ ಯಾತ್ರಾರ್ಥಿಗಳಲ್ಲಿ ಆತಂಕ ಮೂಡಿದ್ದು, ರಾಜ್ಯ ಸರ್ಕಾರ ಮತ್ತು ಆಡಳಿತ ಮಂಡಳಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಅನಾರೋಗ್ಯದಿಂದಲೇ 12 ಯಾತ್ರಿಕರ ದುರ್ಮರಣ
ಅಧಿಕೃತ ಮೂಲಗಳ ಪ್ರಕಾರ, ಮೃತಪಟ್ಟ 18 ಜನರಲ್ಲಿ 12 ಯಾತ್ರಿಕರು ಹವಾಮಾನ ವೈಪರೀತ್ಯ ಮತ್ತು ಆಮ್ಲಜನಕದ ಕೊರತೆಯಿಂದಾಗಿ ಸಂಭವಿಸಿದ ಹಠಾತ್ ಹೃದಯಾಘಾತ ಹಾಗೂ ಇತರ ಆರೋಗ್ಯ ತುರ್ತು ಪರಿಸ್ಥಿತಿಗಳಿಂದ ಸಾವನ್ನಪ್ಪಿದ್ದಾರ. ಕೇದರನಾಥ ಮತ್ತು ಬದರಿನಾಥದಂತಹ ಎತ್ತರದ ಪ್ರದೇಶಗಳಲ್ಲಿ ಚಳಿ ಮತ್ತು ಹವಾಮಾನ ಏರುಪೇರಾಗುವುದರಿಂದ ವಯಸ್ಸಾದ ಯಾತ್ರಿಕರು ಉಸಿರಾಟದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಬಿರುಗಾಳಿ ಮತ್ತು ಅಪಘಾತಗಳ ಅನಾಹುತ
ಉಳಿದ 6 ಸಾವುಗಳು ಭೀಕರ ರಸ್ತೆ ಅಪಘಾತಗಳು ಮತ್ತು ಪ್ರಕೃತಿ ವಿಕೋಪದಿಂದ ಸಂಭವಿಸಿವೆ. ಉತ್ತರಾಖಂಡದ ವಿವಿಧ ಕಣಿವೆ ರಸ್ತೆಗಳಲ್ಲಿ ಸಂಭವಿಸಿದ ವಾಹನ ಅಪಘಾತಗಳು ಹಾಗೂ ಹಿಮಾಲಯನ್ ವಲಯದಲ್ಲಿ ಬೀಸಿದ ಭೀಕರ ಬಿರುಗಾಳಿಗೆ ಮರಗಳು ಮತ್ತು ಕಲ್ಲುಗಳು ಉರುಳಿ ಬಿದ್ದ ಪರಿಣಾಮವಾಗಿ ಈ ತೀರ್ಥಯಾತ್ರಿಕರು ಮೃತಪಟ್ಟಿದ್ದಾರೆ.

ಯಾತ್ರಿಕರಿಗೆ ಕಟ್ಟುನಿಟ್ಟಿನ ವೈದ್ಯಕೀಯ ಸಲಹೆ
ಯಾತ್ರೆಯ ಹಾದಿಯಲ್ಲಿ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಆರೋಗ್ಯ ಇಲಾಖೆಯು ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ. ತೀರ್ಥಯಾತ್ರೆಗೆ ಬರುವ ಮುನ್ನ ಪ್ರತಿಯೊಬ್ಬರೂ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಮತ್ತು ಅಗತ್ಯವಿರುವ ತುರ್ತು ಔಷಧಿಗಳನ್ನು ಜೊತೆಯಲ್ಲೇ ಇಟ್ಟುಕೊಳ್ಳಬೇಕು ಎಂದು ಯಾತ್ರಿಕರಿಗೆ ಸೂಚಿಸಲಾಗಿದೆ.

Must Read