ಹೊಸದಿಗಂತ ವರದಿ, ಭಟ್ಕಳ:
ಭಟ್ಕಳದಲ್ಲಿ ಹುಸಿ ಬಾಂಬ್ ಸ್ಫೋಟಿಸುವ ಬೆದರಿಕೆ ಈಮೇಲ್ ಹಾಕಿದ ಪ್ರಕರಣದ ಆರೋಪಿ ನಿತಿನ್ ಶರ್ಮಾ ಯಾನೆ ಖಾಲೀದ್‌ನನ್ನು ಕೇರಳಕ್ಕೆ ಮಹಜರಿಗಾಗಿ ಭಟ್ಕಳ ಪೊಲೀಸರು ಕರೆದೊಯ್ದಿದ್ದಾರೆ.
ದೆಹಲಿಯ ಪಟೇಲ್ ನಗರದ ನಿವಾಸಿ ನಿತಿನ್ ಶರ್ಮಾ ಯಾನೆ ಖಾಲೀದ್ ಈತನು ಕಳೆದ ಸೆ.೧೦ರಂದು ಭಟ್ಕಳ ಶಹರ ಠಾಣೆಗೆ ಇ-ಮೇಲ್ ಹಾಕಿ ಭಟ್ಕಳವನ್ನೇ ಸ್ಪೋಟಿಸುವ ಬೆದರಿಕೆ ಹಾಕಿದ್ದಲ್ಲದೇ ೨೪ ಗಂಟೆಗಳಲ್ಲಿ ಸ್ಪೋಟಿಸುವ ಬೆದರಿಕೆಯನ್ನೂ ಹಾಕಿದ್ದ ಆರೋಪಿಯಾಗಿದ್ದು ಸಧ್ಯ ಆತನನ್ನು ಮಹಜರಿಗಾಗಿ ಕೇರಳದ ಮೂನಾರಿಗೆ ಕರೆದೊಯ್ಯಲಾಗಿದೆ. ಭಟ್ಕಳದಲ್ಲಿನ ಬಾಂಬ್ ಬೆದರಿಕೆ ಪ್ರಕರಣವೂ ಸೇರಿದಂತೆ ಒಟ್ಟು ೧೬ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಕೇರಳದಿಂದ ತಮಿಳುನಾಡು ಮೂಲದ ಕಣ್ಣನ್ ಗುರುಸ್ವಾಮಿ ಎಂಬಾತನ ಮೊಬೈಲ್‌ನಿಂದ ಆತನದ್ದೇ ಇಮೇಲ್ ಮೂಲಕ ಬೆದರಿಕೆ ಹಾಕಿದ್ದ ಈತನು ಪೊಲೀಸರು ತಮಿಳುನಾಡಿಗೆ ತೆರಳಿ ತನಿಖೆ ನಡೆಸಿದಾಗ ನೈಜ ಆರೋಪಿಯ ಬಗ್ಗೆ ತಿಳಿದುಬಂದಿತ್ತು. ಅದಾಗಲೇ ಬಾಂಬ್ ಸ್ಫೋಟದ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಮೈಸೂರು ಜೈಲಿನಲ್ಲಿದ್ದ ಆರೋಪಿಯನ್ನು ಬಾಡಿ ವಾರಂಟ್ ಮೂಲಕ ಕರೆ ತಂದ ಭಟ್ಕಳ ಪೊಲೀಸರು ಕೇರಳದಲ್ಲಿ ಕೃತ್ಯ ಎಸಗಿರುವ ಜಾಗಾದಲ್ಲಿ ಮಹಜರು ನಡೆಸುತ್ತಿದ್ದಾರೆ. ಈತನ ವಿರುದ್ಧ ಕೇರಳದಲ್ಲಿ ೬, ದೆಹಲಿಯಲ್ಲಿ ೧, ಮಧ್ಯಪ್ರದೇಶದಲ್ಲಿ ೧, ಪುದುಚೇರಿಯಲ್ಲಿ ೨, ಉತ್ತರಾಖಂಡ್‌ದಲ್ಲಿ ೧, ಒಡಿಸ್ಸಾದಲ್ಲಿ ೧, ಆಂಧ್ರಪ್ರದೇಶದಲ್ಲಿ ೧ ಹಾಗೂ ಕರ್ನಾಟಕದಲ್ಲಿ ೩ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.