ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ಕ್ಯಾಂಪಸ್‌ನಲ್ಲಿ ನಕಲಿ ವಿದ್ಯಾರ್ಥಿಯೊಬ್ಬ14 ದಿನಗಳ ಕಾಲ ವಾಸ್ತವ್ಯ ಮಾಡಿದ್ದು ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ.
22 ವರ್ಷದ ಬಿಲಾಲ್ ಅಹ್ಮದ್ ಟೆಲಿ ಬಂಧಿಸಲ್ಪಟ್ಟ ಯುವಕ.
ಜೂನ್ 26ರಂದು ಐಐಟಿ ಬಾಂಬೆಯ ಉದ್ಯೋಗಿಯೊಬ್ಬರು ಬಿಲಾಲ್ ಸೋಫಾದ ಮೇಲೆ ಮಲಗಿರುವುದನ್ನು ನೋಡಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.
ಬಿಲಾಲ್ ಅಹ್ಮದ್ ಟೆಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿ ಬಾಂಬೆ) ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯಂತೆ ನಟಿಸುತ್ತಿದ್ದ. ಕಳೆದ ಹಲವು ದಿನಗಳಿಂದ ಆತ ಕಾಲೇಜ್ ಕ್ಯಾಂಪಸ್‌ನಲ್ಲಿ ಇದ್ದರೂ ಯಾರಿಗೂ ಆತನ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಜೂನ್ 26ರಂದು ಐಐಟಿ ಬಾಂಬೆಯ ಉದ್ಯೋಗಿಯೊಬ್ಬರು ಬಿಲಾಲ್ ಸೋಫಾದ ಮೇಲೆ ಮಲಗಿರುವುದನ್ನು ನೋಡಿ ನೀವು ಯಾರು ಎಂದು ಕೇಳಿದರು. ಆದರೆ ಬಿಲಾಲ್ ಅವರ ಪ್ರಶ್ನೆಗೆ ಉತ್ತರಿಸದೆ ಓಡಿಹೋಗಿದ್ದಾನೆ.
ಅನಂತರ ಕ್ಯಾಂಪಸ್ ನ ಭದ್ರತಾ ಅಧಿಕಾರಿಗಳು ಸಿಸಿಟಿವಿ ಮೂಲಕ ಬಿಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಲ್ಲ. ಆದರೂ ಕಳೆದ ಕೆಲವು ದಿನಗಳಿಂದ ಕ್ಯಾಂಪಸ್‌ನಲ್ಲಿ ಸುತ್ತಾಡುತ್ತಿದ್ದಾನೆ ಎಂದು ತಿಳಿದುಕೊಂಡು ದಾಖಲೆ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಬಳಿಕ ಆತನನ್ನು ಬಂಧಿಸಿದ್ದು, ಜುಲೈ 7ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.