ತಾಲೂಕಿನಲ್ಲಿ ಬಹಿಷ್ಕಾರ ಹಾಕಿದ್ದಾರೆ ಎಂದು ಸುಳ್ಳು ದೂರು: ಗಡೀಪಾರಿಗೆ ಗ್ರಾಮಸ್ಥರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾಲೂಕಿನ ಹೊರಬೈಲು ಗ್ರಾಮದಲ್ಲಿ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಸುಳ್ಳು ದೂರು ದಾಖಲಿಸಿದವರನ್ನು ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹೊರಬೈಲು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬುಧವಾರ ಕಾಲ್ನಡಿಗೆ ಜಾಥಾ ಮೂಲಕ ಪ್ರತಿಭಟನೆ ನಡೆಸಿದರು.

ಬುಧವಾರ ಬೆಳಿಗ್ಗೆ ಗ್ರಾಮದಿಂದ ಹೊರಟು ಸಂಜೆ ವೇಳೆಗೆ ಜಿಲ್ಲಾಧಿಕಾರಿ ಕಚೇರಿ ತಲುಪಿ ಧರಣಿ ನಡೆಸಿದರು. ಗ್ರಾಮದಲ್ಲಿ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಯುವತಿ ಮೂಲಕ ಸುಳ್ಳು ದೂರು ಕೊಡಿಸಲಾಗಿದೆ. ಇದಕ್ಕೆ ಕುಮ್ಮಕ್ಕು ನೀಡಿರುವ ಡಿಎಸ್‌ಎಸ್ ಅಂಬೇಡ್ಕರ್ ವಾದದ ಜಿಲ್ಲಾ ಪ್ರಧಾನ ಸಂಚಾಲಕ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವ ಹಾಲೇಶಪ್ಪ, ಬೈರೇಶಪ್ಪ, ಜಗದೀಶ, ದಿನೇಶ ಹಾಗೂ ಪ್ರೀತಿ ಎಂಬುವರನ್ನು ಗಡೀಪಾರು ಮಾಡಬೇಕು. ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಸುಳ್ಳು ಪ್ರಕರಣಕ್ಕೆ ಬಿ ರಿಪೋರ್ಟ್ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮದಲ್ಲಿ ಸುಮಾರು 50 ಜೋಗಿ ಸಮುದಾಯದ ಕುಟುಂಬಗಳು ಇವೆ. ಸಮುದಾಯದ ಕೆಲ ಯುವಕ-ಯುವತಿಯರು ಅಂತರ್ಜಾತಿ ವಿವಾಹ ಆಗಿ ಎಲ್ಲರೂ ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ದಿನೇಶ ಮತ್ತು ಪ್ರೀತಿ ಪ್ರೇಮಿಸಿ ಮದುವೆ ಆಗಿ ಗ್ರಾಮದಲ್ಲಿಯೇ ವಾಸವಾಗಿದ್ದಾರೆ. ಆರತಕ್ಷತೆ ಕೂಡ ಗ್ರಾಮಸ್ಥರು ಮಾಡಿದ್ದಾರೆ. ಆದರೂ ಗ್ರಾಮದಲ್ಲಿ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ದೂರು ಕೊಡಿಸಿ ಜೋಗಿ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ, ಪ್ರಮುಖರಾದ ಏಳುಕೋಟಿ, ಹರಿಗೆ ರವಿ, ಬಂಗಾರಪ್ಪ, ಸುಬ್ರಾಯಪ್ಪ, ಲಿಂಗಪ್ಪ, ಚಂದ್ರಪ್ಪ, ಮಾನಸ, ರಮೇಶ್, ಸುಬ್ರಹ್ಮಣ್ಯ, ಟಿ.ರಾಜು ಇನ್ನಿತರರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!