ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಪತಿಯೊಂದಿಗೆ ನಡೆದ ಜಗಳದ ಬಳಿಕ ಕೋಪಗೊಂಡ ಮಹಿಳೆ ತನ್ನ ಮೂವರು ಚಿಕ್ಕ ಮಕ್ಕಳನ್ನು ಕತ್ತು ಹಿಸುಕಿ ಕೊಂದು, ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪೊಲೀಸರ ಮಾಹಿತಿ ಪ್ರಕಾರ, ಮೃತ ಮಹಿಳೆಯನ್ನು ತೇಜ್ ಕುಮಾರಿ ಅಲಿಯಾಸ್ ಮಾಯಾ ಎಂದು ಗುರುತಿಸಲಾಗಿದೆ. ಪತಿ ತನ್ನೊಂದಿಗೆ ಮಾತನಾಡದಿರುವುದು ಹಾಗೂ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದಿರುವ ವಿಚಾರದಲ್ಲಿ ಮನೆಯಲ್ಲಿ ಉದ್ಭವಿಸಿದ ಕಲಹವೇ ಈ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. 4 ತಿಂಗಳ ಮಗು, 2 ವರ್ಷದ ಮಗು ಮತ್ತು 7 ವರ್ಷದ ಹೆಣ್ಣುಮಕ್ಕಳು ಮೃತಪಟ್ಟಿದ್ದಾರೆ.
ಘಟನೆ ನಡೆದ ವೇಳೆ ಮಾಯಾ ಅವರ ಪತಿ ಹಾಗೂ ಪ್ರವಾಸಿ-ಬಸ್ ನಿರ್ವಾಹಕ ವಿಕಾಸ್ ಕಶ್ಯಪ್ ಮನೆಯ ಹೊರಗೆ ಮರದ ಕೆಳಗೆ ಮಲಗಿಕೊಂಡಿದ್ದರು ಎಂದು ಪ್ರಾಥಮಿಕ ವರದಿಗಳು ಹೇಳುತ್ತವೆ. ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಪೊಲೀಸರು ಬಾಗಿಲು ಒಡೆದು ಒಳನುಗ್ಗಿದಾಗ ಮಕ್ಕಳ ಶವಗಳು ಹಾಸಿಗೆಯ ಮೇಲೆ ಹಾಗೂ ಮಾಯಾ ಫ್ಯಾನ್‌ಗೆ ನೇತಾಡುತ್ತಿರುವುದು ಪತ್ತೆಯಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ನಿಖರ ಕಾರಣ ಹಾಗೂ ಹಿನ್ನೆಲೆಯನ್ನು ತಿಳಿದುಕೊಳ್ಳಲು ತನಿಖೆ ಮುಂದುವರಿಸಲಾಗಿದೆ.