ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನಿ ಮನರಂಜನಾ ರಂಗವನ್ನು ಬೆಚ್ಚಿಬೀಳಿಸಿರುವ ಘೋರ ಘಟನೆ ನಡೆದಿದೆ. ಪ್ರಸಿದ್ಧ ನಟಿ ಹಾಗೂ ರಿಯಾಲಿಟಿ ಶೋ ‘ತಮಾಶಾ ಘರ್’ ಖ್ಯಾತಿಯ 32 ವರ್ಷದ ಹುಮೈರಾ ಅಸ್ಗರ್ ಅಲಿ ಅವರು ಸಾವನ್ನಪ್ಪಿದ್ದಾರೆ. ಅವರು ಮೃತಪಟ್ಟಿದ್ದು ಎರಡು ವಾರಗಳ ಹಿಂದೆ ಎನ್ನಲಾಗಿದ್ರೂ, ಅವರ ಶವವು ಜುಲೈ 8 ರಂದು ಪತ್ತೆಯಾಗಿದ್ದು ಅದು ಸಂಪೂರ್ಣವಾಗಿ ಕೊಳೆತುಹೋಗಿತ್ತು.
ಪೊಲೀಸರ ಪ್ರಕಾರ, ಹುಮೈರಾ ಅಲಿ ಕರಾಚಿಯ ಇತ್ತೆಹಾದ್ ಕಮರ್ಷಿಯಲ್‌ನಲ್ಲಿರುವ ಫ್ಲಾಟ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಬೇರೆ ಯಾರಿಗೂ ಈ ಬಗ್ಗೆ ಮಾಹಿತಿ ಸಿಗದ ಕಾರಣ ಅವರ ಶವವು ಕೊಳೆತು ಹೋಗುವವರೆಗೆ ಯಾರಿಗೂ ಅನುಮಾನ ಬರಲಿಲ್ಲ. ಜುಲೈ 8 ರಂದು ಮನೆ ಬೀಗ ಮುರಿದು ಪ್ರವೇಶಿಸಿದ ಪೊಲೀಸರು ಅವರ ಶವವನ್ನು ಪತ್ತೆ ಹಚ್ಚಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿನ್ನಾ ಪೋಸ್ಟ್‌ಗ್ರ್ಯಾಜುಯೇಟ್ ಮೆಡಿಕಲ್ ಸೆಂಟರ್‌ಗೆ ಕಳಿಸಲಾಗಿದೆ. ಮೃತದೇಹದ ಹಿನ್ನಲೆಯಲ್ಲಿ ಈಗಲೂ ತನಿಖೆ ಮುಂದುವರೆದಿದ್ದು, ಯಾವುದೇ ಊಹಾಪೋಹಗಳಿಂದ ದೂರವಿರುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹುಮೈರಾ ಅವರು ಕಳೆದ ಕೆಲ ವರ್ಷಗಳಿಂದ ಕುಟುಂಬದಿಂದ ದೂರವಿದ್ದು, ಒಬ್ಬಂಟಿಯಾಗಿ ಬದುಕುತ್ತಿದ್ದಾರಂತೆ. ತಿಂಗಳುಗಳಿಂದ ಬಾಡಿಗೆ ಪಾವತಿಸದ ಕಾರಣ ಮನೆಯ ಮಾಲೀಕರು ಸಂಬಂಧಿಸಿದ ದೂರನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮನೆಗೆ ತೆರಳಿದಾಗ ಶವವನ್ನು ಪತ್ತೆ ಹಚ್ಚಿದ್ದಾರೆ. ಇದೀಗ ಅವರ ಮೊಬೈಲ್ ಫೋನ್ ಮತ್ತು ಇತರ ದಾಖಲೆಗಳ ಮೂಲಕ ಸಂಬಂಧಿಕರ ಪತ್ತೆಗೆ ಪ್ರಯತ್ನ ಮುಂದುವರಿದಿದೆ.
ARY ಡಿಜಿಟಲ್ ವಾಹಿನಿಯ ‘ತಮಾಶಾ ಘರ್’ ರಿಯಾಲಿಟಿ ಶೋನಲ್ಲಿ ನಟಿಸಿ ಹೆಸರು ಗಳಿಸಿದ ಹುಮೈರಾ ಅವರು 2015ರ “ಜಲೈಬಿ” ಸಿನಿಮಾದಲ್ಲೂ ಅಭಿನಯಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ 7 ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದ ಅವರು ನಟಿ, ಚಿತ್ರಕಾರ್ತಿ, ಶಿಲ್ಪಿ ಮತ್ತು ಫಿಟ್ನೆಸ್ ಪ್ರಿಯೆಯಾಗಿ ತಮ್ಮನ್ನು ಪರಿಚಯಿಸಿಕೊಂಡಿದ್ದರು.