ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮಾಜಿ ಅಧ್ಯಕ್ಷರಾದ ಪಹ್ಲಾಜ್ ನಿಹಲಾನಿ (76) ಅವರು ಜೂನ್ 4 ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಯಕೃತ್ತಿನ ಕಾಯಿಲೆಯಿಂದ (ಲಿವರ್ ಸಿರೋಸಿಸ್) ಬಳಲುತ್ತಿದ್ದ ಅವರು, ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಚಿತ್ರರಂಗದ ಮೂಲಗಳು ಖಚಿತಪಡಿಸಿವೆ. ಮೃತರು ಪತ್ನಿ ನೀತಾ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳ ಸರದಾರ:
ಹಿಂದಿ ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದ ಪಹ್ಲಾಜ್ ನಿಹಲಾನಿ ಅವರು 1982ರ ‘ಹಾತ್ಕಡಿ’ ಚಿತ್ರದ ಮೂಲಕ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದರು. ನಟ ಗೋವಿಂದ ಅವರನ್ನು ಬಾಲಿವುಡ್‌ಗೆ ಪರಿಚಯಿಸಿ, ಸ್ಟಾರ್ ಪಟ್ಟಕ್ಕೇರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ನಿರ್ಮಾಣದ ‘ಆಂಖೇ’, ‘ಅಂದಾಜ್’, ‘ಶೋಲಾ ಔರ್ ಶಬ್ನಮ್’, ‘ತಲಾಶ್’ ಮತ್ತು ‘ರಂಗೀಲಾ ರಾಜಾ’ ಮುಂತಾದ ಕಮರ್ಷಿಯಲ್ ಚಿತ್ರಗಳು ಬಾಲಿವುಡ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದವು.
ವಿವಾದಾತ್ಮಕ ಸೆನ್ಸಾರ್ ಮಂಡಳಿ ಅಧ್ಯಕ್ಷ ಅವಧಿ:
ಪಹ್ಲಾಜ್ ನಿಹಲಾನಿ ಅವರು 2015 ರಿಂದ 2017 ರವರೆಗೆ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಸಿನಿಮಾಗಳಿಗೆ ಕತ್ತರಿ ಪ್ರಯೋಗ ಮಾಡುವ ಮತ್ತು ಪ್ರಮಾಣಪತ್ರ ನೀಡುವ ವಿಷಯದಲ್ಲಿ ಅವರು ತೆಗೆದುಕೊಂಡ ಕಠಿಣ ನಿರ್ಧಾರಗಳು ಚಿತ್ರರಂಗದಲ್ಲಿ ತೀವ್ರ ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದವು. ‘ಉಡ್ತಾ ಪಂಜಾಬ್’ ಮತ್ತು ‘ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ’ ಚಿತ್ರಗಳ ಸೆನ್ಸಾರ್ ವಿಚಾರದಲ್ಲಿ ಇವರು ಕೈಗೊಂಡ ಕ್ರಮಗಳು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದವು.
ಹಿರಿಯ ನಿರ್ಮಾಪಕರ ನಿಧನಕ್ಕೆ ಬಾಲಿವುಡ್ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಮುಂಬೈನ ಸಾಂತಾಕ್ರೂಜ್ ಹಿಂದೂ ಸ್ಮಶಾನದಲ್ಲಿ ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನೆರವೇರಲಿದೆ.



