February 3, 2026
Tuesday, February 3, 2026
spot_img

ಕನ್ನಡದ ಪ್ರಸಿದ್ಧ ಲೇಖಕಿ, ಕಾದಂಬರಿಕಾರ್ತಿ ಆಶಾ ರಘು ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಪ್ರಸಿದ್ಧ ಲೇಖಕಿ, ಕಾದಂಬರಿಕಾರ್ತಿ, ಪ್ರಕಾಶಕಿ ಹಾಗೂ ಕಲಾವಿದೆ ಆಶಾ ರಘು ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು, ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇವರ ಪತಿ, ಖ್ಯಾತ ಆಹಾರ ತಜ್ಞ ಹಾಗೂ ಲೇಖಕ ಕೆಸಿ ರಘು ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಆಶಾ ಅವರಿಗೆ ಪುತ್ರಿ ಇದ್ದಾರೆ. ಪತಿ ನಿಧನ ನಂತರ ಮಾನಸಿಕವಾಗಿ ಬಹಳ ನೊಂದಿದ್ದರು. ನಿನ್ನೆ ರಾತ್ರಿ ಅವರು ಮನೆಯ ಕೊಠಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮನೆಯವರಿಗೆ ಗೊತ್ತಾಗಿ ಬಾಗಿಲು ಒಡೆದು ರಕ್ಷಿಸುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ, ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಆವರ್ತ, ಗತ, ‘ಮಾಯೆ’, ‘ಚಿತ್ತರಂಗ’, ಕೆಂಪು ದಾಸವಾಳ, ವಕ್ಷ ಸ್ಥಲ ಕಾದಂಬರಿಗಳನ್ನು, ‘ಆರನೇ ಬೆರಳು’, ‘ಬೊಗಸೆಯಲ್ಲಿ ಕಥೆಗಳು’, ‘ಅಪರೂಪದ ಪುರಾಣ ಕಥೆಗಳು’ ಮೊದಲಾದ ಕಥಾಸಂಕಲನಗಳನ್ನೂ, ‘ಚೂಡಾಮಣಿ’, ‘ಕ್ಷಮಾದಾನ’, ‘ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು’ ‘ಪೂತನಿ ಮತ್ತಿತರ ನಾಟಕಗಳು’, ಮೊದಲಾದ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇವರ ‘ಆವರ್ತ’ ಕಾದಂಬರಿಯ ಕುರಿತ ಕೃತಿ ‘ಆವರ್ತ-ಮಂಥನ’ ಕೂಡಾ ಪ್ರಕಟಗೊಂಡಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2014), ಸೂರ್ಯನಾರಾಯಣ ಚಡಗ ಪ್ರಶಸ್ತಿ (2014), ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ (2019), ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ (2020), ಸೇಡಂನ ಅಮ್ಮ (2021), ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ (2023)ಗಳನ್ನು ಪಡೆದಿದ್ದಾರೆ. ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2023 ರಲ್ಲಿ ಇವರಿಗೆ ‘ಸಾಹಿತ್ಯಾಮೃತ ಸರಸ್ವತಿ’ ಎಂಬ ಬಿರುದು ನೀಡಿ ಗೌರವಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !