ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ದಿ ರಾಜಾ ಸಾಬ್’ ತೆರೆಕಂಡಿದ್ದು, ದೇಶದ ಹಲವು ಭಾಗಗಳಲ್ಲಿ ಅಭಿಮಾನಿಗಳ ಸಂಭ್ರಮ ಮಿತಿಮೀರಿದೆ. ಆದರೆ ಈ ಸಂಭ್ರಮವೇ ಒಂದು ಕಡೆ ಆತಂಕಕ್ಕೆ ಕಾರಣವಾಗಿದೆ. ಸಿನಿಮಾ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರದೊಳಗೆ ಪಟಾಕಿ ಸಿಡಿಸಿ ಆರತಿ ಬೆಳಗಿದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ವರದಿಯಾಗಿದೆ. ಅದೃಷ್ಟವಶಾತ್, ಸಮಯಕ್ಕೆ ಮುನ್ನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ದೊಡ್ಡ ಅನಾಹುತ ತಪ್ಪಿದೆ.
ಈ ಘಟನೆ ಆಂಧ್ರ ಅಥವಾ ತೆಲಂಗಾಣದಲ್ಲಿ ಅಲ್ಲ, ಒಡಿಶಾದ ರಾಯಗಡ ಜಿಲ್ಲೆಯ ‘ಅಶೋಕ ಟಾಕೀಸ್’ ಚಿತ್ರಮಂದಿರದಲ್ಲಿ ನಡೆದಿದೆ. ಪ್ರಭಾಸ್ ಅವರ ಎಂಟ್ರಿ ದೃಶ್ಯಕ್ಕೆ ಉತ್ಸಾಹಗೊಂಡ ಅಭಿಮಾನಿಗಳು ಚಿತ್ರಮಂದಿರದ ಒಳಗೇ ಪಟಾಕಿ ಹೊಡೆದಿದ್ದು, ಪರದೆ ಸಮೀಪ ಬೆಂಕಿ ಕಾಣಿಸಿಕೊಂಡಿದೆ. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ರಾತ್ರಿ ಊಟಕ್ಕೆ ಬಿಸಿ ಬಿಸಿ ಪನೀರ್ ಪಲಾವ್, ರೆಸಿಪಿ ಇಲ್ಲಿದೆ ನೋಡಿ
‘ದಿ ರಾಜಾ ಸಾಬ್’ ಪ್ರಭಾಸ್ ನಟನೆಯ ಮೊದಲ ಹಾರರ್ ಸಿನಿಮಾ ಆಗಿದ್ದು, ನಿರ್ದೇಶಕ ಮಾರುತಿ ಚಿತ್ರಕ್ಕೆ ಆಕ್ಷನ್ ಹಾಗೂ ಫ್ಯಾಂಟಸಿ ಮಿಶ್ರಣ ನೀಡಿದ್ದಾರೆ. ಇನ್ನೊಂದು ಕಡೆ, ಕೆಲ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಸಿನಿಮಾದ ದೃಶ್ಯದಿಂದ ಪ್ರೇರಿತರಾಗಿ ಮೊಸಳೆಯ ಪ್ರತಿಕೃತಿಯನ್ನು ತಂದು ಸಂಭ್ರಮಿಸಿದ್ದಾರೆ.

