ಹೊಸದಿಗಂತ ವರದಿ ದಾವಣಗೆರೆ:
ತೋಟ ಉಳುಮೆ ಮಾಡುವಾಗ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಯುವ ರೈತನೊಬ್ಬ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ತಾಲ್ಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ರೈತ ರಾಘವೇಂದ್ರ (38 ವರ್ಷ) ಮೃತ ದುರ್ದೈವಿ.
ತಮ್ಮದೇ ತೋಟದಲ್ಲಿ ಟ್ರ್ಯಾಕ್ಟರ್ ನಿಂದ ಉಳುಮೆ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ವಿದ್ಯುತ್ ತಂತಿಯನ್ನು ತೆಂಗು ಮತ್ತು ಅಡಿಕೆ ಮರದ ಮೂಲಕ ಕೊಂಡೊಯ್ದು ಮೋಟಾರ್ ಗೆ ಸಂಪರ್ಕ ಕಲ್ಪಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ರಾಘವೇಂದ್ರ ಉಳುಮೆ ಮಾಡುತ್ತಿದ್ದಾಗ, ಮರದಿಂದ ಸ್ವಲ್ಪ ಜಾರಿದ್ದ ವಿದ್ಯುತ್ ವೈರ್ ಟ್ರ್ಯಾಕ್ಟರ್ ಎಂಜಿನ್ ಮೇಲ್ಭಾಗದ ಕಬ್ಬಿಣದ ಹುಕ್ಕಿಗೆ ಸಿಕ್ಕಿಹಾಕಿಕೊಂಡಿದೆ. ಇದನ್ನು ಗಮನಿಸದ ರಾಘವೇಂದ್ರ ಟ್ರ್ಯಾಕ್ಟರ್ ಚಲಾಯಿಸಿದಾಗ ವೈರ್ ನ ಮೇಲು ಪದರ ಕಿತ್ತುಕೊಂಡು, ಅಲ್ಯುಮಿನಿಯಂ ತಂತಿಗಳು ಟ್ರ್ಯಾಕ್ಟರ್ ಗೆ ಸ್ಪರ್ಶಿಸಿವೆ. ಇದರಿಂದಾಗಿ ವಿದ್ಯುತ್ ಪ್ರವಹಿಸಿ ರಾಘವೇಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಬೆಸ್ಕಾಂ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.