ಹೊಸದಿಗಂತ ವರದಿ,ನಾಗಮಂಗಲ :
ಜಮೀನಿನಲ್ಲಿ ಕೃಷಿ ಚಟುವಟಿಕೆಗೆ ತೆರಳುತ್ತಿದ್ದ ರೈತನಿಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಸುನಗನಹಳ್ಳಿ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ.
ಗ್ರಾಮದ ಮರಿಯಪ್ಪನ ಮಗ ಎಂ.ಯೋಗೇಶ್(34) ಎಂಬುವರೇ ಸಾವನ್ನಪ್ಪಿರುವ ರೈತನಾಗಿದ್ದು, ಎಂದಿನಂತೆ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗೆಂದು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಸ್ಪರ್ಷಿಸಿದ ಪರಿಣಾಮ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದರು.
ಸ್ಥಳೀಯ ಕುರಿಗಾಹಿಗಳಿಂದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಯೋಗೇಶ್ ಪೋಷಕರು ತಕ್ಷಣ ಸಮೀಪದ ದೇವಲಾಪುರದ ಸಮುದಾಯದ ಆರೋಗ್ಯ ಕೇಂದ್ರಕ್ಕೆ ಕರೆತಂದರಾದರೂ ಪರಿಸ್ಥಿತಿ ಗಂಭೀರವಾಗಿರುವ ಹಿನ್ನಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದರು. ಆಂಬ್ಯುಲೆನ್ಸ್ ಬರುವುದು ತಡವಾದ್ದರಿಂದ ಕಾರಿನಲ್ಲಿಯೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬರುವಷ್ಟರಲ್ಲಿ ಯೋಗೇಶ್ ಮೃತಪಟ್ಟಿದ್ದರು.
ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಯೋಗೇಶ್ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಘಟನೆ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.