ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಸವನಹಳ್ಳಿ ಕೊಪ್ಪಲು ಗ್ರಾಮದಲ್ಲಿ ರೈತ ಬಿ.ಎಸ್. ರವಿ ಪಂಚಾಯಿತಿ ಅವ್ಯವಹಾರ ಬಯಲಿಗೆಳೆಯುವ ಸಂಕಲ್ಪ ಮಾಡಿ, RTI ಮಾಹಿತಿ ಪಡೆಯುವುದಕೋಸ್ಕರ ತಮ್ಮ ಹಸುವನ್ನೇ ಮಾರಾಟ ಮಾಡಿದ ಘಟನೆ ನಡೆದಿದೆ.
ತಮ್ಮ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಗಳಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನುವ ಅನುಮಾನದಿಂದ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಕೇಳಿದರು. ದಾಖಲೆಗಳ ಸಂಖ್ಯೆ 16,000 ಪುಟಗಳಷ್ಟಿದೆ ಎಂದು ಪಿಡಿಓ ತಿಳಿಸಿದರೂ, ಹಿಂದೆ ಸರಿಯದೆ ರವಿ ಅವರು ತನಿಖೆಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನೂ ತೆಗೆದುಕೊಳ್ಳಲು ಮುಂದಾದರು.
ಪ್ರತಿ ಪುಟಕ್ಕೆ 2 ರಂತೆ ಒಟ್ಟು 32,000 ರೂಪಾಯಿ ಪಾವತಿಸಬೇಕಾದಾಗ ಆ ಮೊತ್ತವನ್ನು ವ್ಯವಸ್ಥೆ ಮಾಡುವುದು ರೈತನಿಗೆ ಕಷ್ಟವಾಗಿತ್ತು. ಹಣಕ್ಕಾಗಿ ಬೇರೆ ದಾರಿ ಕಾಣದೆ, ಹಾಲು ಕೊಡುತ್ತಿದ್ದ ತಮ್ಮ ಹಸುವನ್ನೇ ಮಾರಾಟ ಮಾಡಿ ಬಂದ ಹಣದಿಂದ ಶುಲ್ಕ ಪಾವತಿಸಿದರು. ಬಳಿಕ, ಅಷ್ಟೊಂದು ದೊಡ್ಡ ಪ್ರಮಾಣದ ದಾಖಲೆಗಳನ್ನು ತೆಗೆದುಕೊಂಡು ಹೋಗಲು ಎತ್ತಿನಗಾಡಿಯನ್ನೇ ಬಳಸಿಕೊಂಡರು. ಈ ದೃಶ್ಯವನ್ನು ಕಂಡ ಗ್ರಾಮ ಪಂಚಾಯಿತಿ ಸಿಬ್ಬಂದಿ ಶಾಕ್ ಆಗಿದ್ದಾರೆ.
ದಾಖಲೆ ಪಡೆಯಬಾರದೆಂಬಂತೆ ಕೆಲವರು ದೂರು ನೀಡುವ ಮೂಲಕ ರವಿಯವರನ್ನು ತಡೆಯಲು ಯತ್ನಿಸಿದರೂ, ಅವರು ಹಿಂದೆ ಸರಿಯದೆ, ಈಗ ಈ ದಾಖಲೆಗಳ ಮೂಲಕ ಗ್ರಾಮ ಪಂಚಾಯಿತಿಯಲ್ಲಿನ ಅಕ್ರಮ ಬಯಲಿಗೆಳೆಯುವ ಸಿದ್ಧತೆಯಲ್ಲಿ ಇದ್ದಾರೆ. ಸತ್ಯದ ಹೋರಾಟಕ್ಕೆ ಹಸು ತ್ಯಜಿಸಿದ ಈ ರೈತನ ಕಥೆ ಪಾರದರ್ಶಕತೆಗಾಗಿ ಸಾಮಾನ್ಯ ಜನರೂ ಎಷ್ಟು ದೂರ ಹೋಗಬಲ್ಲರು ಎಂಬುದಕ್ಕೆ ಜೀವಂತ ಉದಾಹರಣೆ.

