ಹೊಸದಿಗಂತ ವರದಿ,ಬಳ್ಳಾರಿ:
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ರಾಜ್ಯದ ಎಲ್ಲ ವರ್ಗದ ಜನರು ತತ್ತರಿಸಿದ್ದು, ಮತ್ತೆ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥ್ ರೆಡ್ಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಗ್ಯಾರಂಟೀಗಳಿಗೆ ಹಣ ಹೊಂದಾಣಿಕೆ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ, ಪೆಟ್ರೋಲ್, ಡೀಸೆಲ್, ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ, ಇತ್ತೀಚೆಗೆ ಮತ್ತೆ ಹಾಲಿನ ಬೆಲೆ ಹೆಚ್ಚಳ ಮಾಡುವ ಮೂಲಕ ರೈತ ಸಮೂಹವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಕಳೆದ ಬಜೆಟ್ ನಲ್ಲಿ ಹಾಲು ಉತ್ಪಾದಕರಿಗೆ ನೀಡಿದ ಪ್ರೋತ್ಸಾಹ ಧನವನ್ನು ಪಶುಪಾಲನೆ ಇಲಾಖೆ ಇತರ ಖರ್ಚುಗಳಿಗೆ ಬಳಕೆ ಮಾಡಿಕೊಂಡಿದೆ, ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಕಳೆದ 8 ತಿಂಗಳಿಂದ ನೀಡಿಲ್ಲ, ಈ ಕುರಿತು ರೈತರು ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಹಕಾರಿ ಇಲಾಖೆ ಅವರನ್ನು ಕೇಳಿ ಅಂತಾರೆ, ಸಹಕಾರಿ ಇಲಾಖೆಯವ್ರನ್ನು ಕೇಳಿದರೆ, ಆರ್ಥಿಕ ಇಲಾಖೆ ಅವರ ಮೇಲೆ ಹೇಳ್ತಾರೆ, ಸರ್ಕಾರ ಸಂಪೂರ್ಣ ರೈತ ವಿರೋಧಿ ಸರ್ಕಾರವಾಗಿದ್ದು, ಕೂಡಲೇ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹಾಲಿನ ಪ್ರೋತ್ಸಾಹ ಧನವು ಇಲ್ಲ, ರೈತರಿಗೆ ಬರ ಪರಿಹಾರವೂ ಇಲ್ಲ, ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದ್ದು, ರೈತರ ಬವಣೆ ಹೇಳತೀರದಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮ ಅವಧಿಯಲ್ಲಿ ಜಾರಿಗೊಳಿಸಿದ್ದ ಭೂ ಸಿರಿ ಯೋಜನೆಯನ್ನು ನಿಲ್ಲಿಸಿದ್ದು, ದ್ವೇಷದ ರಾಜಕಾರಣ ಮಾಡುತ್ತಿದೆ, ಜೊತೆಗೆ ರೈತ ವಿದ್ಯನಿಧಿ ಯೋಜನೆಯನ್ನು ನಿಲ್ಲಿಸಿದೆ, ರೈತರು ತಮ್ಮ ಕೊಳವೆಬಾವಿ ಪಂಪ್ ಸೆಟ್ ಗಳ ವಿದ್ಯುತ್ ಸಂಪರ್ಕ ಪಡೆಯಲು ವಿದ್ಯುತ್ ಪರಿವರ್ತಕಕ್ಕೆ ದುಪ್ಪಟ್ಟು ಹಣ ಪಾವತಿಸುವ ಸ್ಥಿತಿ ಎದುರಾಗಿದೆ, ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೇಲ್ಧಿಕಾರಿಗಳ ಆದೇಶ ಎನ್ನುವ ಸಿದ್ಧ ಉತ್ತರ ಸಿಗಲಿದೆ. ಮುದ್ರಾಂಕ ಶುಲ್ಕ, ಪೆಟ್ರೋಲ್, ಡೀಸೆಲ್, ಹಾಲಿನ ಬೆಲೆ ಏರಿಕೆ ಜೊತೆಗೆ ಆಸ್ತಿ ನೋಂದಣಿ ದರ ಶೇ. 30 ರಷ್ಟು ಹೆಚ್ಚಾಗಿದೆ, ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.