March 23, 2026
Monday, March 23, 2026
spot_img

ಯುಕೆಟಿಎಲ್ ವಿರುದ್ಧ ಸಿಡಿದೆದ್ದ ರೈತರು: ಪ್ರತಿಭಟನೆ ನಡುವೆಯೇ ವಿಷ ಸೇವಿಸಲು ಮುಂದಾದ ಅನ್ನದಾತ

ಹೊಸದಿಗಂತ ಮೂಡುಬಿದಿರೆ:

ಮೊಟ್ಟ ಮೊದಲ ಬಾರಿಗೆ ಮೂಡುಬಿದಿರೆಯಲ್ಲಿ ಕೃಷಿ ಭೂಮಿ ಉಳಿವಿಗಾಗಿ ವಿಷ ಸೇವಿಸಲು ರೈತ ಮುಖಂಡ ಮುಂದಾಗಿದ್ದಾರೆ.

ಉಡುಪಿ ಕಾಸರಗೋಡು 400ಕೆವಿ ವಿದ್ಯುತ್ ಲೈನ್ ತೆನೆಭರಿತ ಭತ್ತದ ಗದ್ದೆಯಲ್ಲಿ ಹಾದುಹೋಗುತ್ತಿದ್ದು, ಪೈರು ತುಂಬಿದ ಭತ್ತದ ಗದ್ದೆಯನ್ನು ಸಂಪೂರ್ಣ ನಾಶ ಮಾಡಿ ಬೃಹತ್ ತಂತಿಗಳನ್ನು ಗದ್ದೆಯಲ್ಲಿ ಹಾಕಿ ಕಾಮಗಾರಿಗೆ ಮುಂದಾದ ಯೋಜನೆಯ ವಿರುದ್ಧ ರೈತ ಮುಖಂಡರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ನನ್ನ ಹೆಣದ ಮೇಲೆ ನಿಮ್ಮ ಯೋಜನೆ ಸಾಗಲಿ ಎಂದು ವಿಷ ಸೇವನೆಗೆ ರೈತ ಮುಖಂಡ, ಆಲ್ಫೋನ್ಸ್ ಡಿ’ಸೋಜ ರೋಷ ವ್ಯಕ್ತಪಡಿಸಿ, ವಿಷದ ಬಾಟಲಿಯೊಂದಿಗೆ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ನಿಡ್ಡೋಡಿ, ಮಂಜನಬೈಲು ಎಂಬಲ್ಲಿ ದಿನಪೂರ್ತಿ ರೈತರ ಪ್ರತಿಭಟನೆ ನಡೆಯಿತು. ಯೋಜನೆಯ ಅನುಷ್ಠಾನಕ್ಕೆ ಬಂದ ಅಧಿಕಾರಿಗಳು, ಹಾಗೂ ಕಾರ್ಮಿಕರು ಅನಿವಾರ್ಯವಾಗಿ ಕಾಮಗಾರಿ ಸ್ಥಗಿತಗೊಳಿಸಿ, ರೈತರ ಮನವೊಲಿಸುವ ವಿಫಲ ಪ್ರಯತ್ನ ಮಾಡಿದರು.

ಹಿನ್ನಲೆ ಏನು?:

ಬಹುನಿರೀಕ್ಷಿತ ಉಡುಪಿ ಕಾಸರಗೋಡು 400ಕೆವಿ ವಿದ್ಯುತ್ ಲೈನ್ ಅನುಷ್ಠಾನಕ್ಕೆ ಕಂಪೆನಿಯವರು ಮುಂದಾಗಿದ್ದಾರೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸೂಕ್ತ ಮಾಹಿತಿಯನ್ನೂ ನೀಡದೆ, ಸಮರ್ಪಕ ಪರಿಹಾರವನ್ನೂ ಕೊಡನೆ ಯೋಜನೆ ಅನುಷ್ಠಾನಕ್ಕೆ ಕೈಯಿಕ್ಕಿದ್ದೇ ರೈತರ ವಿರೋಧಕ್ಕೆ ಕಾರಣವಾಗಿದೆ. ಆರಂಭದಿAದಲೂ ಈ ಯೋಜನೆಯ ವಿರುದ್ಧ ಧ್ವನಿ ಎತ್ತಿದವರು ಕೃಷಿಕ ಅಲ್ಫೋನ್ಸ್ ಡಿ’ಸೋಜ. ಇದೀಗ ಅವರ ಭತ್ತದ ಗದ್ದೆಯ ಮೂಲಕವೇ ಯೋಜನೆಯ ವಿದ್ಯುತ್ ಲೈನುಗಳನ್ನು ಹಾಕಿದ್ದು, ಅವರ ರೋಷಕ್ಕೆ ಕಾರಣವಾಗಿದೆ. ತೆನೆಭರಿತ ಪೈರುಗಳು ನಾಶವಾಗಿ ಹೋಗುತ್ತಿರುವುದನ್ನು ಕಂಡು ಕೃಷಿಕರು ರೋಷಗೊಂಡಿದ್ದಾರೆ.

ಕಳ್ಳರಂತೆ ಬಂದರು!:

ಯೋಜನೆಯನ್ನು ಅನುಷ್ಠಾನಗೊಳಿಸಲು ಯಾರೂ ಇಲ್ಲದ ವೇಳೆ ಬೃಹತ್ ತಂತಿಗಳನ್ನು ಗದ್ದೆಗೆ ತಂದು ಹಾಕುವ ಕಾರ್ಯ ಮಾಡಿದ್ದಾರೆ. ಒಂದು ತಿಂಗಳು ಕಳೆದರೆ ಭತ್ತ ಕಟಾವು ಮಾಡುತ್ತಿದ್ದೆ. ಅದಕ್ಕಿಂತ ಮೊದಲೇ ಈ ಕೃತ್ಯ ಮಾಡಿದ್ದಾರೆ. ನನ್ನ ಹೊಟ್ಟೆಗೆ ಹೊಡೆಯುವ ಕಾರ್ಯ ಆಗಿದೆ ಎಂದು ನೋವು ಹಂಚಿಕೊಳ್ಳುತ್ತಾರೆ ಆಲ್ಫೋನ್ಸ್.

ಪ್ರತಿಭಟನೆಯಲ್ಲಿ ಸುಮಾರು ೨೨ ಸ್ಥಳೀಯ ರೈತರು ಪಾಲ್ಗೊಂಡಿದ್ದರು. ಮೂಡುಬಿದಿರೆ ಕಂದಾಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಬಂದು ರೈತರ ಮನವೊಲಿಸುವ ಪ್ರಯತ್ನ ಮಾಡಿದ್ದರು.

ಹೆಚ್ಚುವರಿ ಪೊಲೀಸ್ :

ಸಂಜೆಯ ತನಕವೂ ಪ್ರತಿಭಟನೆ ಮುಂದುವರಿದಿದ್ದು, ಸಂಜೆಯಾಗುತ್ತಿದ್ದAತೆಯೇ ಮೂಡುಬಿದಿರೆ ಠಾಣಾಧಿಕಾರಿ ಸಂದೇಶ್ ನೇತೃತ್ವದ ಹೆಚ್ಚುವರಿ ಪೊಲೀಸ್ ನಿಯೋಗ ಸ್ಥಳಕ್ಕೆ ಆಗಮಿಸಿತ್ತು.

ಇದೇ ಸಂದರ್ಭದಲ್ಲಿ ಕಂಪೆನಿಯ ಮುಖ್ಯಸ್ಥರೂ ಆಗಮಿಸಿ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !