April 28, 2026
Tuesday, April 28, 2026
spot_img

ಯಲ್ಲಾಪುರ ಜೋಡುಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ: ವಾಯುವಿಹಾರಿಗಳ ಮೇಲೆ ‘ಜಲಚರ’ದ ಕಣ್ಣು, ಜನರಲ್ಲಿ ಮನೆಮಾಡಿದ ಭೀತಿ!

ಹೊಸದಿಗಂತ ಯಲ್ಲಾಪುರ:

ಪಟ್ಟಣದ ಹೃದಯಭಾಗದಲ್ಲಿರುವ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜೋಡುಕೆರೆಯಲ್ಲಿ ಶನಿವಾರ ತಡರಾತ್ರಿ ಮತ್ತೆ ಮೊಸಳೆ ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಕಾಣಿಸಿಕೊಂಡಿದ್ದ ಮೊಸಳೆ, ಎರಡು ಮೂರು ತಿಂಗಳ ಬಿಡುವಿನ ನಂತರ ಮತ್ತೆ ದರ್ಶನ ನೀಡಿದೆ.

ಮೊಸಳೆಯಿಂದ ಎದುರಾಗಬಹುದಾದ ಅಪಾಯವನ್ನು ಮನಗಂಡ ಅರಣ್ಯ ಇಲಾಖೆ ಈಗಾಗಲೇ ಅದನ್ನು ಸೆರೆಹಿಡಿಯಲು ಬೋನು ಇರಿಸಿದೆ. ಆದರೆ, ಚಾಣಾಕ್ಷ ಮೊಸಳೆ ಮಾತ್ರ ಈವರೆಗೆ ಬಲೆಗೆ ಬಿದ್ದಿಲ್ಲ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆಯ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಮೊಸಳೆಯು ಕೆರೆಯಿಂದ ಹೊರಬಂದು ದಡದಲ್ಲಿ ಹರಿದಾಡಿ ಮತ್ತೆ ನೀರಿಗೆ ಇಳಿಯುವ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಕೆರೆಯ ಆಸುಪಾಸಿನಲ್ಲೇ ತಾಲೂಕು ಆಸ್ಪತ್ರೆ, ಪ್ರೌಢಶಾಲೆ ಹಾಗೂ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ. ಪ್ರತಿದಿನ ನೂರಾರು ಜನರು ಇಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಅರಿವಿಲ್ಲದೆ ಯಾರಾದರೂ ಕೆರೆಗೆ ಇಳಿದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಸುತ್ತಮುತ್ತಲಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !