ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ: ಪೊಲೀಸರಿಂದ ಅಶ್ರುವಾಯು ಪ್ರಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿ ಹರಿಯಾಣ ಗಡಿ ಶಂಭು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಗಡಿಯಲ್ಲಿ ಭಾನುವಾರ (ಇಂದು) ದೆಹಲಿ ಪ್ರವೇಶಿಸಲು ಯತ್ನಿಸಿದ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಅಶ್ರುವಾಯು ದಾಳಿ ನಡೆಸಿದರು.

ಶುಕ್ರವಾರ ದೆಹಲಿ ಗಡಿ ಪ್ರವೇಶಕ್ಕೆ ತಡೆ ಬಿದ್ದ ಹಿನ್ನಲೆ ಸರ್ಕಾರದ ಜೊತೆಗಿನ ಮಾತುಕತೆಗೆ ರೈತ ಮುಖಂಡರು ಒಂದು ದಿನದ ಸಮಯ ನೀಡಿದ್ದರು. ಪ್ರಧಾನಿ ಮೋದಿ ಸರ್ಕಾರದಿಂದ ಮಾತುಕತೆಗೆ ಯಾವುದೇ ಆಹ್ವಾನ ಬಾರದ ಹಿನ್ನಲೆ ರೈತರು ಇಂದು ಮತ್ತೆ ದೆಹಲಿ ಗಡಿ ಪ್ರವೇಶಕ್ಕೆ ಯತ್ನಿಸಿದರು. ಆದರೆ ಹರಿಯಾಣ ಪೊಲೀಸರು ರೈತರನ್ನು ತಡೆದರು.

ದೆಹಲಿ ಪ್ರವೇಶಕ್ಕೆ ಪೊಲೀಸರು ಗುರುತಿನ ಚೀಟಿ ಕೇಳುತ್ತಿದ್ದಾರೆ. ಆದರೆ ದೆಹಲಿಗೆ ಹೋಗಲು ಅವಕಾಶ ನೀಡುತ್ತೇವೆ ಎಂಬ ಗ್ಯಾರಂಟಿ ನೀಡುತ್ತಿಲ್ಲ, ದೆಹಲಿಗೆ ಹೋಗಲು ಅನುಮತಿ ಇಲ್ಲ ಎನ್ನುತ್ತಾರೆ, ಹಾಗಾದರೆ ಗುರುತಿನ ಚೀಟಿ ಏಕೆ ಕೊಡಬೇಕು? ಪ್ರವೇಶಕ್ಕೆ ಅನುಮತಿ ಕೊಡುವುದಾದರೆ ಗುರುತಿನ ಚೀಟಿ ನೀಡುತ್ತೇವೆ ಎಂದು ಪ್ರತಿಭಟನಾನಿರತ ರೈತರೊಬ್ಬರು ಹೇಳಿದರು. ರೈತರು ಗುಂಪು ಗುಂಪಾಗಿ ಚಲಿಸುತ್ತಿದ್ದಾರೆಯೇ ಹೊರತು 101 ರೈತರ ಯೋಜಿತ ಗುಂಪಿನಂತೆ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆದರೆ, ಇದನ್ನು ನಿರಾಕರಿಸಿದ ರೈತರು, ಪೊಲೀಸರಿಗೆ ಯಾವುದೇ ಪಟ್ಟಿ ನೀಡಿಲ್ಲ ಎಂದು ಹೇಳಿದರು. ದೆಹಲಿಯತ್ತ ಸಾಗಲು ರೈತರ ಹೊಸ ಪ್ರಯತ್ನ ಮಾಡುವ ದೃಷ್ಟಿಯಿಂದ, ಪಂಜಾಬ್-ಹರಿಯಾಣ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ರೈತರನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ತಡೆಯುವ ಸೆಕ್ಷನ್ 163 (ಹಿಂದೆ ಸೆಕ್ಷನ್ 144) ಅಡಿಯಲ್ಲಿ ನಿಷೇಧಾಜ್ಞೆಗಳು ಸಹ ಗಡಿಯಲ್ಲಿ ಜಾರಿಯಲ್ಲಿವೆ. ಶಂಭು ಹೊರತುಪಡಿಸಿ, ಪಂಜಾಬ್ ಮತ್ತು ಹರಿಯಾಣ ನಡುವಿನ ಖಾನೌರಿ ಗಡಿಯನ್ನು ಬಿಗಿಯಾದ ನಾಲ್ಕು ಪದರಗಳ ಭದ್ರತೆಯಲ್ಲಿ ಮುಚ್ಚಲಾಗಿದೆ, 13 ತುಕಡಿಗಳನ್ನು ನಿಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!