ದೆಹಲಿಯಲ್ಲಿ ರೈತರ ಪ್ರತಿಭಟನೆ: ಹರಿಯಾಣದಲ್ಲಿ ಇಂಟರ್ನೆಟ್ ಸ್ಥಗಿತ, ಸೆಕ್ಷನ್ 144 ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೆಹಲಿಯಲ್ಲಿ (New Delhi) ಫೆಬ್ರವರಿ 13ರಂದು ರೈತರ ಪ್ರತಿಭಟನೆ (Farmer’s Protest) ನಡೆಯಲಿದ್ದು, ಈ ಹಿನ್ನೆಲೆ ಹಿನ್ನೆಲೆ ಹರಿಯಾಣ (Haryana) ಸರ್ಕಾರವು ರಾಜ್ಯದ ಏಳು ಜಿಲ್ಲೆಗಳಾದ ಅಂಬಾಲಾ, ಜಿಂದ್, ಕುರುಕ್ಷೇತ್ರ, ಹಿಸಾರ್, ಕೈತಾಲ್, ಫತೇಹಾಬಾದ್ ಮತ್ತು ಸಿರ್ಸಾದಲ್ಲಿ ಇಂಟರ್ನೆಟ್ ಸೇವೆಗಳನ್ನು (Internet Service) ನಿಷೇಧಿಸಿದೆ. ಅಲ್ಲದೇ ಚಂಡೀಗಢಕ್ಕೆ ಸಮೀಪವಿರುವ ಪಂಚಕುಲದಲ್ಲಿ ಸೆಕ್ಷನ್ 144ನ್ನು (Section 144) ಜಾರಿಗೊಳಿಸಿದೆ.

ಈ ಕುರಿತು ಮಾತನಾಡಿದ ಪಂಚಕುಲ (Panchakula) ಡಿಸಿಪಿ ಸುಮೇರ್ ಸಿಂಗ್ ಪ್ರತಾಪ್, ಪಾದಚಾರಿಗಳು ಅಥವಾ ಟ್ರ‍್ಯಾಕ್ಟರ್ ಟ್ರಾಲಿಗಳು ಮತ್ತು ಇತರ ವಾಹನಗಳಲ್ಲಿ ಯಾವುದೇ ರಾಡ್‌ಗಳು, ಆಯುಧಗಳನ್ನು ಸಾಗಿಸುವಂತಿಲ್ಲ. ಮತ್ತು ರ‍್ಯಾಲಿ, ಪ್ರತಿಭಟನೆಗಳು ಅಥವಾ ಮೆರವಣಿಗೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 13 ರಂದು ರೈತ ಸಂಘಟನೆಗಳು ದೆಹಲಿಗೆ ತಮ್ಮ ಮೆರವಣಿಗೆಯನ್ನು ಘೋಷಿಸಿದ ಬಳಿಕ , ರಾಷ್ಟ್ರ ರಾಜಧಾನಿಯನ್ನು ತಲುಪುವುದನ್ನು ತಡೆಯಲು ಪಂಜಾಬ್-ಹರಿಯಾಣ ಗಡಿ (Punjab-Haryana Border) ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪಂಜಾಬ್-ಹರಿಯಾಣ ಗಡಿಯನ್ನು ಮುಚ್ಚಲಾಗಿದೆ. ಬ್ಯಾರಿಕೇಡ್‌ಗಳು, ಬಂಡೆಗಳು, ಮರಳು ತುಂಬಿದ ಟಿಪ್ಪರ್‌ಗಳು ಮತ್ತು ಮುಳ್ಳುತಂತಿಗಳಿಂದ ಗಡಿಗಳನ್ನು ಮುಚ್ಚಲಾಗಿದೆ.

ಅಧಿಕೃತ ಆದೇಶದ ಪ್ರಕಾರ, ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಫೆಬ್ರವರಿ 11 ರಂದು ಬೆಳಗ್ಗೆ 6 ರಿಂದ ಫೆಬ್ರವರಿ 13 ರಂದು ರಾತ್ರಿ 11.30 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ಇನ್ನು ಗಡಿಯನ್ನು ಮುಚ್ಚುವುದರ ಜೊತೆಗೆ ಸಂಚಾರ ಸಲಹೆಯನ್ನು ಸಹ ಬಿಡುಗಡೆ ಮಾಡಲಾಗಿದೆ. ಪಂಜಾಬ್ ಮತ್ತು ಹರಿಯಾಣದ ಪ್ರಮುಖ ಮಾರ್ಗಗಳಲ್ಲಿ ಸಂಭವನೀಯ ಟ್ರಾಫಿಕ್ ಅಡೆತಡೆಗಳನ್ನು ನಿರೀಕ್ಷಿಸುವ ಮೂಲಕ ಹರಿಯಾಣ ಪೊಲೀಸರು ಸಂಚಾರ ಸಲಹೆಯನ್ನು ನೀಡಿದ್ದಾರೆ.

ಹರಿಯಾಣದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ), ಮಮತಾ ಸಿಂಗ್ ಈ ಕುರಿತು ಮಾತನಾಡಿದ್ದು, ಪ್ರಸ್ತುತ ಟ್ರಾಫಿಕ್ ಪರಿಸ್ಥಿತಿಯನ್ನು ತಿಳಿಯಲು, ಹರಿಯಾಣ ಪೊಲೀಸರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಅನುಸರಿಸಿ. ಅಥವಾ ಹರಿಯಾಣ ಪೊಲೀಸ್ ಫೇಸ್‌ಬುಕ್ ಖಾತೆಯಲ್ಲಿ ತಿಳಿದುಕೊಳ್ಳಬಹುದು. ಯಾವುದೇ ಸಂದರ್ಭದಲ್ಲಾದರೂ 112 ನಂಬರ್ ಅನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದು ಎಂದು ವಿವರಿಸಿದ್ದಾರೆ.

ಕುರುಕ್ಷೇತ್ರದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಅಲ್ಲದೇ ಆಡಳಿತ ಮಂಡಳಿ ಹರಿಯಾಣ ಪಂಜಾಬ್ ಗಡಿಯನ್ನು ಪೆಹೋವಾ ಗ್ರಾಮದ ತ್ಯುಕರ್‌ನಲ್ಲಿ ಮುಚ್ಚಿದೆ. ಫೆಬ್ರವರಿ 13 ರಂದು ದೆಹಲಿಗೆ ರೈತರ ಮೆರವಣಿಗೆಯಿಂದಾಗಿ ಹರಿಯಾಣ ಆಡಳಿತ ಫುಲ್ ಅಲರ್ಟ್ ಆಗಿದೆ. ಇದನ್ನೂ ಓದಿ: 17ನೇ ಲೋಕಸಭೆಯಲ್ಲಿ 221 ಮಸೂದೆ ಅಂಗೀಕಾರ: ಪ್ರಹ್ಲಾದ್ ಜೋಶಿ

ರೈತರ ಬೇಡಿಕೆಗಳೇನು?:

ಎಂಎಸ್‌ಪಿಗೆ ಕಾನೂನು ಖಾತರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ಕೃಷಿ ಸಾಲ ಮನ್ನಾ, ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದು, ಲಖೀಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಕೊಡಿಸುವುದು ರೈತರ ಪ್ರಮುಖ ಬೇಡಿಕೆಯಾಗಿದೆ. ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಹಲವು ರೈತ ಸಂಘಟನೆಗಳು ಈ ವಿಷಯವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!