ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣ ಹೋಬಳಿಯ ಕೃಷಿ ಭೂಮಿ ಭೂಸ್ವಾಧೀನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಹೋರಾಟಗಾರರು, ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿದರು.
ಸಚಿವರಾದ ಕೆ.ಹೆಚ್.ಮುನಿಯಪ್ಪ, ಬೈರತಿ ಸುರೇಶ್, ಶಾಸಕ ಬಿ.ಆರ್.ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನಟ ಪ್ರಕಾಶ್ ರಾಜ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಂತಿಮ ಅಧಿಸೂಚನೆಯಾಗಿದ್ದು, ಈ ಬಗ್ಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಿ ಮತ್ತೆ ರೈತರ ಸಭೆ ಕರೆಯಲಾಗುವುದು.
ಈ ಸಂಬಂಧ ಕಾನೂನು ಸಮಸ್ಯೆ ನಿವಾರಿಸಲು ಸರ್ಕಾರಕ್ಕೆ ಹತ್ತು ದಿನಗಳ ಕಾಲಾವಾಕಾಶ ಬೇಕಿದೆ. ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಂಡು ಜುಲೈ 15 ರಂದು ರೈತ ಹೋರಾಟಗಾರರೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.