ಕಂದಾಯ ಇಲಾಖೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ: ಸಚಿವ ಆರ್.ಅಶೋಕ್‌ಗೆ ರೈತ ಸಂಘ ಮನವಿ

ಹೊಸದಿಗಂತ ವರದಿ, ಬೀದರ್:
ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ರೈತ ಸಂಘದ ಪ್ರಮುಖರು ಸಚಿವ ಆರ್. ಅಶೋಕ್ ಬಳಿ ಒತ್ತಾಯಿಸಿದೆರು.
ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲೆಗೆ ಆಗಮಿಸಿರುವ ಸಚಿವರನ್ನು ಭೇಟಿಯಾಗಿ ರೈತ ನಾಯಕರು, ಈ ಕುರಿತು ಮನವಿ ಸಲ್ಲಿಸಿದ್ದಾರೆ.
ಬೆಳೆ ದೃಢೀಕರಣ ಪತ್ರ, ವಂಶಾವಳಿ ಪ್ರಮಾಣ ಪತ್ರ, ಸಣ್ಣ ರೈತ ಪ್ರಮಾಣ ಪತ್ರ ಮುಂತಾದವುಗಳನ್ನು ಪಡೆದುಕೊಳ್ಳಲು ತಿಂಗಳುಗಟ್ಟಲೇ ಓಡಾಡಬೇಕಾಗುತ್ತಿದೆ. ಹಕ್ಕು ಬದಲಾವಣೆಗೆ ಕನಿಷ್ಠ 6 ತಿಂಗಳು ಬೇಕಾಗುತ್ತಿದೆ. ಜೊತೆಗೆ 10 ರಿಂದ 20 ಸಾವಿರ ರೂ. ಲಂಚ ಕೊಡಬೇಕಾಗುತ್ತಿದೆ. ಗ್ರಾಮ ಲೆಕ್ಕಾಧಿಕಾರಿಯಿಂದ ತಹಸೀಲ್ದಾರ್‌ವರೆಗೆ ಎಲ್ಲರಿಗೂ ಈ ಲಂಚದ ಹಣ ಸಂದಾಯವಾಗುತ್ತಿದೆ ಎಂದು ರೈತಸಂಘದ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಅಣದೂರ ಮತ್ತಿತರರು ಆರೋಪಿಸಿದ್ದಾರೆ.
ಫಾರ್ಮ್ ನಂ. 10, ಹದ್ದುಬಸ್ತು ಪಡೆಯಲು ಕನಿಷ್ಠ 3000 ರೂ. ಕೊಡಬೇಕಾಗುತ್ತಿದೆ. ಸರ್ವೆ ಮಾಡಲು ಬಂದವರು 3 ರಿಂದ 5 ಸಾವಿರ ರೂ. ಪಡೆಯುತ್ತಿದ್ದಾರೆ. ಹಣ ಕೊಡದಿದ್ದಲ್ಲಿ ಕೆಲಸವೇ ಆಗುತ್ತಿಲ್ಲ. ಇಲ್ಲದ ನೆಪ ಮುಂದಿಟ್ಟು ರೈತರನ್ನು ಸತಾಯಿಸಲಾಗುತ್ತಿದೆ ಎಂದು ರೈತ ಮುಖಂಡರು ದೂರಿದ್ದಾರೆ.
ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ದಾಖಲೆ ಪಡೆಯುವಲ್ಲಿನ ಕಷ್ಟ ತಪ್ಪಿಸಲು ರೈತರಿಗೆ ಪಟ್ಟಾ ಪಾಸ್‌ಬುಕ್ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಕಬ್ಬು ಪೂರೈಸಿದ ರೈತರಿಗೆ ಸುಮಾರು 88 ಕೋಟಿ ರೂ. ಪಾವತಿ ಮಾಡಬೇಕಾಗಿದೆ. ಕಬ್ಬಿನ ಹಣ ಪಾವತಿ ಮಾಡುವಂತೆ ಸಕ್ಕರೆ ಕಾರಖಾನೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಂಘದ ಪ್ರಮುಖರು ಆಗ್ರಹಿಸಿದ್ದಾರೆ.
ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ್, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ತಾಲೂಕು ಅಧ್ಯಕ್ಷ ಬಾಬುರಾವ ಜೋಳದಾಪಕಾ ಭಾಲ್ಕಿ, ಜಿಲ್ಲಾ ಉಪಾಧ್ಯಕ್ಷ ಶಂಕರೆಪ್ಪ ಪಾರ, ಚಂದ್ರಶೇಖರ ಜಮಖಂಡಿ, ತಾಲೂಕು ಅಧ್ಯಕ್ಷರಾದ ಪ್ರವೀಣ ಕುಲಕರ್ಣಿ, ಮನೋಹರರಾವ್ ಹೊರಂಡಿ, ನಾಗಯ್ಯ ಸ್ವಾಮಿ, ಪ್ರಕಾಶ ಬಾವಗೆ ಔರಾದ್, ಸುಭಾಷ ರಗಟೆ ಬಸವಕಲ್ಯಾಣ ಮತ್ತಿತರರು ಮನವಿ ಸಲ್ಲಿಸುವಾಗ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!