ಕರ್ನಾಟಕದಾದ್ಯಂತ ಮುಂಗಾರು ಚುರುಕುಗೊಂಡಿರುವ ಈ ಸಮಯದಲ್ಲಿ ರೈತರಿಗೆ ಹಾಗೂ ಪಶುಪಾಲಕರಿಗೆ ಇದು ಆತಂಕಕ್ಕೆ ಕಾರಣವಾಗಿದೆ. ನಿರಂತರ ಮಳೆಯಿಂದಾಗಿ ಕೊಟ್ಟಿಗೆಗಳ ಸುತ್ತಮುತ್ತ ತೇವಾಂಶ ಹೆಚ್ಚಾಗುವುದರಿಂದ ಸೊಳ್ಳೆ, ಹುಳ, ಕೀಟ ಹಾಗೂ ಕೆಲವೊಮ್ಮೆ ಹಾವು-ಚೇಳುಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಹಾಲು ನೀಡುವ ಹಸುಗಳ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಹಾಲಿನ ಉತ್ಪಾದನೆಯೂ ಕುಗ್ಗಬಹುದು.
ಇಂತಹ ಸಂದರ್ಭದಲ್ಲಿ, ಪಶುಗಳ ಆರೋಗ್ಯವನ್ನು ಕಾಪಾಡಲು ಯಾವುದೇ ವೆಚ್ಚವಿಲ್ಲದ ಮೂರು ಪರಿಣಾಮಕಾರಿ ಮನೆಮದ್ದುಗಳನ್ನು ಅನುಸರಿಸಬಹುದಾಗಿದೆ:
ಕಾರ್ಟನ್ ಹೊಗೆಯಿಂದ ಸೊಳ್ಳೆ ತೊಲಗಿಸಿ
ಹೆಚ್ಚಾಗಿ ಸಂಜೆ ವೇಳೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಿರುತ್ತದೆ. ಈ ಸಮಯದಲ್ಲಿ ಮೊಟ್ಟೆಯನ್ನು ಇಡುವ ಕಾಗದದಿಂದ ಮಾಡಿರುವ ಕಾರ್ಟನ್ ಗೆ ಬೆಂಕಿ ಹತ್ತಿಸಿ ಕೊಟ್ಟಿಗೆಯ ಒಂದು ಮೂಲೆಯಲ್ಲಿ ಇಡಬೇಕು. ಇದರ ಹೊಗೆ ಕೊಟ್ಟಿಗೆಯ ಸುತ್ತ ಸೊಳ್ಳೆಗಳನ್ನು ದೂರ ಮಾಡುತ್ತದೆ.
ಬೇವು-ತುಳಸಿ
ಬೇವು ಹಾಗೂ ತುಳಸಿಯು ಅತ್ಯಂತ ಔಷಧೀಯ ಗುಣಗಳಿಂದ ಕೂಡಿವೆ. ಒಣ ಬೇವಿನ ಎಲೆ, ತುಳಸಿ ಹಾಗೂ ತೊಗಟೆಗಳನ್ನು ಬೆರಣಿಯಲ್ಲಿ ಸೇರಿಸಿ ಬೆಂಕಿಗೆ ಹಾಕಿದರೆ, ಅದರ ಹೊಗೆಯು ಸೊಳ್ಳೆ, ಕೀಟಗಳನ್ನು ದೂರದೂಡುತ್ತದೆ. ಇದು ಕೊಟ್ಟಿಗೆಯ ಸುತ್ತಮುತ್ತ ಪಶುಗಳಿಗೆ ರಕ್ಷಣಾ ವಲಯವನ್ನು ಸೃಷ್ಟಿಸುತ್ತದೆ.
ಸೀತಾಫಲದ ಎಲೆಗಳಿಂದ ತಯಾರಿಸಿದ ದ್ರಾವಕ
ಮೂರ್ನಾಲ್ಕು ಲೀಟರ್ ನೀರಿಗೆ ಸೀತಾಫಲದ ಎಲೆಗಳನ್ನು ಹಾಕಿ ನಿಧಾನ ಉರಿಯಲ್ಲಿ ಕುದಿಸಿ. ಈ ಕಷಾಯವನ್ನು ಶೋಧಿಸಿ ಬಾಟಲಿಗೆ ತುಂಬಿ ಕೊಟ್ಟಿಗೆಯಲ್ಲಿ ಸಿಂಪಡಿಸಿದರೆ, ಸೊಳ್ಳೆಗಳು ದನದ ಹತ್ತಿರ ಬರುವುದಿಲ್ಲ. ಇದು ತೀವ್ರವಾದ ಕೀಟಪೀಡಿತ ಪ್ರದೇಶಗಳಲ್ಲಿ ಕೂಡ ಪರಿಣಾಮಕಾರಿ.
ಮಳೆಗಾಲದಲ್ಲಿ ಪಶುಗಳ ಆರೈಕೆ ಬಹುಮುಖ್ಯ. ಮನೆಯಲ್ಲಿಯೇ ದೊರೆಯುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಉಪಾಯಗಳನ್ನು ಅನುಸರಿಸಿದರೆ, ನೀವು ನಿಮ್ಮ ಪ್ರಾಣಿಗಳನ್ನು ಸುರಕ್ಷಿತವಾಗಿ ಕಾಯುವುದಲ್ಲದೆ, ಉತ್ತಮ ಉತ್ಪಾದನೆಯನ್ನೂ ನಿರೀಕ್ಷಿಸಬಹುದು.