ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಕರ್ನಾಟಕದ ರೈತರು ಕಳೆದ ಐದು ವರ್ಷಗಳಲ್ಲಿ (2020-21 ರಿಂದ 2024-25) 10,000 ಕೋಟಿ ಬೃಹತ್ ಮೊತ್ತದ ಬೆಳೆ ವಿಮಾ ಪರಿಹಾರ ಪಡೆದಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಸಂಸತ್ತಿಗೆ ತಿಳಿಸಿದ್ದಾರೆ.
ವಿಶೇಷವಾಗಿ, ಈ ಐದು ವರ್ಷಗಳ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯ 2,48,212 ರೈತರಿಗೆ 559.91 ಕೋಟಿ ವಿಮಾ ಪರಿಹಾರ ದೊರಕಿದೆ. ಜಿಲ್ಲೆಯ ರೈತರು ತಮ್ಮ ಪಾಲಿನ ಪ್ರೀಮಿಯಂ ಮೊತ್ತವಾಗಿ ಸುಮಾರು 80 ಕೋಟಿ ಪಾವತಿಸಿದ್ದರು. ಆದರೆ, ರೈತರಿಗೆ ವಿಮೆ ತಲುಪಿದವರ ಸಂಖ್ಯೆ 5,81,527 ಲಕ್ಷ ಎಂಬುದಕ್ಕೆ ಬದಲಾಗಿ 2,48,212 ಲಕ್ಷ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇಡೀ ರಾಜ್ಯದ ಮಟ್ಟದಲ್ಲಿ, 1,29,95,086 (ಸುಮಾರು 1.30 ಕೋಟಿ) ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಈ ರೈತರು ಒಟ್ಟಾಗಿ 1,584 ಕೋಟಿ ವಿಮೆ ಪ್ರೀಮಿಯಂ ಅನ್ನು ಪಾವತಿಸಿದ್ದಾರೆ.
ಬೆಳಗಾವಿ ಸಂಸದರಾದ ಗೊವಿಂದ ಕಾರಜೋಳ ಅವರು ಸಂಸತ್ ಅಧಿವೇಶನದಲ್ಲಿ ಕೃಷಿ ಸಚಿವರನ್ನು ಉದ್ದೇಶಿಸಿ ಮಹತ್ವದ ಪ್ರಶ್ನೆಗಳನ್ನು ಕೇಳಿದ್ದರು. 2024-25ನೇ ಸಾಲಿನ ಬೆಳೆ ವಿಮೆ ದಾವೆಗಳ ಕುರಿತು ಯಾವುದೇ ದೂರುಗಳು ಬಂದಿವೆಯೇ? ಬೆಳೆ ಹಾನಿ ಅಂದಾಜು ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಕಳೆದ ಐದು ವರ್ಷಗಳ ಜಿಲ್ಲಾವಾರು ವಿಮಾ ವಿವರ ಮತ್ತು ವಿಮೆ ಪರಿಹಾರವನ್ನು ಶೀಘ್ರವಾಗಿ ಪಾವತಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ? – ಎಂಬುದೇ ಆ ಪ್ರಶ್ನೆಗಳಾಗಿದ್ದವು.
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ ಕೇಂದ್ರ ಕೃಷಿ ಸಚಿವ ರಾಮನಾಥ್ ಠಾಕೂರ್ ಅವರು, ಕರ್ನಾಟಕದ ರೈತರಿಗೆ ಲಭ್ಯವಾದ 10,000 ಕೋಟಿ ಪರಿಹಾರದ ಮಹತ್ವದ ಅಂಕಿ-ಅಂಶಗಳನ್ನು ಸದನಕ್ಕೆ ನೀಡಿದ್ದಾರೆ.

