ಹೊಸದಿಗಂತ ವರದಿ,ವಿಜಯಪುರ:
ಗುಮ್ಮಟ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ವಾರ್ಷಿಕೋತ್ಸವದ ನಿಮಿತ್ತ ಆಕರ್ಷಕ ಪಥಸಂಚಲನ ಭಾನುವಾರ ನಡೆಯಿತು.
ಗಣವೇಷಧಾರಿಗಳು ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಪಥ ಸಂಚಲನ ಆರಂಭಿಸಿ, ವಾಟರ್‌ಟ್ಯಾಂಕ್ ಬಳಿ ಬರುತ್ತಿದ್ದಂತೆ ನಂತರ ಎರಡು ತಂಡಗಳಾಗಿ ವಿಭಜಿತಗೊಂಡು, ಅಲ್ಲಿಂದ ನಗರದ ಅಡಕ್ಕಿ ಗಲ್ಲಿಯ ಗಣಪತಿ ಗುಡಿ ಹಾಗೂ ಶಿವಾಜಿ ವೃತ್ತದ ಮೂಲಕ ಹೀಗೆ ಎರಡು ಮಾರ್ಗಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಗಾಂಧಿವೃತ್ತದಲ್ಲಿ ಸಂಗಮಗೊಂಡು, ಅಲ್ಲಿಂದ ಸಿದ್ಧೇಶ್ವರ ದೇವಸ್ಥಾನದ ಮೂಲಕ ಸಾಗುತ್ತ ದರ್ಬಾರ್ ಹೈಸ್ಕೂಲ್ ಮೈದಾನದ ವರೆಗೂ ತೆರಳಿ ಸಭೆಯಾಗಿ ಮಾರ್ಪಟ್ಟಿತು.
ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಮಹಿಳೆಯರು ನೀರು ಹಾಕಿ ಸ್ವಚ್ಛಗೊಳಿಸಿ, ಬಣ್ಣಬಣ್ಣದ ರಂಗೋಲಿ ಬಿಡಿಸಿ ಅಲಂಕರಿಸಿ, ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿ ಸುರಿಸಲಾಯಿತು.
ಪಥಸಂಚಲನದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.