ಹೊಸದಿಗಂತ ವರದಿ,ಚಿತ್ರದುರ್ಗ:
ಶತ ಶತಮಾನಗಳ ತುಳಿತಕ್ಕೊಳಗಾಗಿರುವ ಶೋಷಿತ ಸಮುದಾಯಗಳನ್ನು ಮೇಲೆತ್ತುವ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸಬೇಕಾದ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮತ್ತು ಉತ್ತಮ ಪ್ರಾಂತ ಪ್ರಚಾರ ಪ್ರಮುಖರಾದ ಅರುಣ್‌ಜೀ ಹೇಳಿದರು.
ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮ ದೇವಸ್ಥಾನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂ ಸಮಾಜ ಸಂಘಟನೆಯಾಗಬೇಕು. ಎಲ್ಲ ವರ್ಗದ ಜನರು ಪರಸ್ಪರ ಸಹಬಾಳ್ವೆಯಿಂದ ಬದುಕುವಂತಾಗಬೇಕು. ಆ ಮೂಲಕ ದೇಶದಾದ್ಯಂತ ಸಾಮರಸ್ಯ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಸಂಘವು ಕಾರ್ಯ ನಿರ್ವಹಿಸಲಿದೆ ಎಂದರು.
ಕಳೆದ ೫೭೦ ವರ್ಷಗಳ ಹಿಂದೆ ಹಿಂದೂ ಸಮಾಜ ಕಳೆದುಕೊಂಡಿದ್ದ ರಾಮ ಮಂದಿರವನ್ನು ಹೋರಾಟದ ಮೂಲಕ ಈಗ ಪಡೆದುಕೊಳ್ಳಲಾಗಿದೆ. ಜನವರಿ ತಿಂಗಳಲ್ಲಿ ಶ್ರೀರಾಮ ದೇವರ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ. ಶ್ರೀರಾಮ ದೇವರನ್ನು ಇಡೀ ವಿಶ್ವದಲ್ಲಿ ಮರ್ಯಾದ ಪುರುಷ ಎಂದು ಕರೆಯಲಾಗುತ್ತದೆ. ಅಲ್ಲದೇ ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದೆ ಎಂದು ಹೇಳಿದರು.
ದಸರಾ ನವರಾತ್ರಿ ಅಂಗವಾಗಿ ಪ್ರತಿ ವರ್ಷ ಆಯುಧ ಪೂಜಾ ಕಾರ್ಯಕ್ರಮ ನಡೆಸಲಾಗುತ್ತದೆ. ನಮ್ಮ ಬದುಕಿನಲ್ಲಿ ದಿನನಿತ್ಯ ಬಳಸುವ ಆಯುಧಗಳನ್ನು ಸ್ವಚ್ಛವಾಗಿ ತೊಳೆದು ಶುಭ್ರಗೊಳಿಸಿ ಶ್ರದ್ಧೆಯಿಂದ ಪೂಜಿಸಲಾಗುತ್ತದೆ. ಈ ಸಂಪ್ರದಾಯ ಪುರಾತನ ಕಾಲದಿಂದ ನಡೆದುಕೊಂಡು ಬಂದಿದ್ದು, ಈಗಲೂ ಮುಂದುವರಿಸಿಕೊoಡು ಹೋಗಲಾಗುತ್ತಿದೆ ಎಂದರು.
ವೇದಿಕೆ ಕಾರ್ಯಕ್ರಮದ ನಂತರ ಪಥ ಸಂಚಲನ ಆರಂಭಿಸಲಾಯಿತು. ಬರಗೇರಮ್ಮ ದೇವಸ್ಥಾನದಿಂದ ಹೊರಟ ಮೆರವಣ ಗೆ ಬರಗೇರಿ ಬೀದಿ ಮೂಲಕ ಸಾಗಿ, ಸಿಹಿನೀರು ಹೊಂಡದ ರಸ್ತೆ, ನಂತರ ಬುರುಜನಹಟ್ಟಿ ಸರ್ಕಲ್ ತಲುಪಿತು. ಬಳಿಕ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿoದ ಸಾಗಿ ಆನೆಬಾಗಿಲು ತಲುಪಿತು. ಅಲ್ಲಿಂದ ಗಾಂಧಿ ವೃತ್ತ, ನಂತರ ಹೊಳಲ್ಕೆರೆ ರಸ್ತೆ ಮಾರ್ಗವಾಗಿ ಸಾಗಿ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿತು. ಅಲ್ಲಿಂದ ಮುಂದೆ ಸಾಗಿ ಬರಗೇರಮ್ಮ ದೇವಸ್ಥಾನದ ಆವರಣದಲ್ಲಿ ಮುಕ್ತಾಯವಾಯಿತು.
ಪಥ ಸಂಚಲನ ಸಾಗುವ ಮಾರ್ಗದುದ್ದಕ್ಕೂ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಎಂಬಿತ್ಯಾದಿ ಘೋಷಣೆಗಳು ಮೊಳಗಿದವು. ಮಥ ಸಂಚಲನದಲ್ಲಿ ಸುಮಾರು ೪೦೦ ಜನ ಗಣವೇಷಧಾರಿಗಳು ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮದ ಸಂದರ್ಭದಲ್ಲಿ ನಗರ ಸಂಘಚಾಲಕ ಕೃಷ್ಣಮೂರ್ತಿ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಶಾಸಕ ಎಂ.ಚoದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮತ್ತಿತರರು ಹಾಜರಿದ್ದರು.