ಹೊಸದಿಗಂತ ವರದಿ, ಕುಮಟಾ:
ಮುಂಬರುವ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಕುಮಟಾದಲ್ಲಿ ಘೋಷಣೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡದಿದ್ದರೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಛೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನರ ಕೂಗಿಗೆ ಉಸ್ತುವಾರಿ ಸಚಿವರು ಸ್ಪಂದಿಸಿ ಹಣ ಬಿಡುಗಡೆ ಮಾಡಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಸವಾಲ್ ಹಾಕಿದ್ದಾರೆ.
ಅವರು ಮುಂಬರುವ ಬಜೆಟ್ ನಲ್ಲಿ ಕುಮಟಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಮಂಜೂರು ಮಾಡಬೇಕು ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡುವ ಯೋಜನಗಳ ಘೋಷಣೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿ ಕುಮಟಾದಿಂದ ಭಟ್ಕಳದವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡ ಪಾದಯಾತ್ರೆಯ ಚಾಲನೆಯಲ್ಲಿ ಮಾತನಾಡುತ್ತಾ,ಈ ಹಿಂದೆ ನಮ್ಮ ಕುಮಟಾದ ಶಾಸಕ ದಿನಕರ್ ಶೆಟ್ಟಿಯವರು, ವಕೀಲ ಆರ್. ಜಿ. ನಾಯ್ಕರವರು ಹೀಗೆ ಅನೇಕರು ಸೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಾಕಷ್ಟು ಹೋರಾಟ ಮಾಡಿದ ಫಲವಾಗಿ ಕುಮಟಾದಲ್ಲಿ ಆಸ್ಪತ್ರೆ ಮಂಜೂರು ಮಾಡಿಸಿದ್ದರು.ಆದರೆ ಈ ಸರ್ಕಾರದಲ್ಲಿ ಆ ಆಸ್ಪತ್ರೆಗೆ ಹಣವನ್ನು ಕೊಡುವ ಕೆಲಸವಾಗಿಲ್ಲ.ಇದೇ ತಿಂಗಳ 16 ರಂದು ಬಜೆಟ್ ಅಧಿವೇಶನವಿದ್ದು, ಆ ಬಜೆಟ್ ನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ತಕ್ಷಣ ಹಣ ಮಂಜೂರಾಗಬೇಕು, ಹಾಗೂ ನಮ್ಮ ಭಾಗದಲ್ಲಿ ಮೆಡಿಕಲ್ ಕಾಲೇಜು ಕೂಡ ಆಗಬೇಕು ಎಂದು ಒತ್ತಾಯ ಮಾಡಿದರು.
ಬುಧವಾರ ಭಟ್ಕಳದಲ್ಲಿ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರವರಿಗೆ ಮನವಿ ನೀಡುತ್ತೇವೆ. ಇದು ಸರ್ಕಾರಕ್ಕೆ ಜಿಲ್ಲೆಯ ಜನ ಕೊಡುತ್ತಿರುವ ಎಚ್ಚರಿಕೆಯಾಗಿದೆ. ಒಂದು ವೇಳೆ ಬಜೆಟ್ ಅಧಿವೇಶನದಲ್ಲಿ ನಮ್ಮ ಜಿಲ್ಲೆಯ ಆಸ್ಪತ್ರೆಗೆ ಹಣ ನೀಡಿಲ್ಲ ಎಂದರೆ, ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಭಟ್ಕಳದ ಕಛೇರಿ ಮುಂದೆ ಕುಳಿತು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ದಿನಕರ ಶೆಟ್ಟಿ , ಇಂದಿನ ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ್ ಆಸ್ಪತ್ರೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಇದು ನಮ್ಮ ಸ್ವಾಭಿಮಾನದ ಪ್ರಶ್ನೆಯಾಗಿದೆ . ಅನಂತಮೂರ್ತಿ ಹೆಗಡೆ ಯವರ ಹೋರಾಟಕ್ಕೆ ಕೈಜೋಡಿಸಿ, ಕುಮಟಾದಲ್ಲಿ ಆಸ್ಪತ್ರೆ ಆಗಲೇಬೇಕು ಇಂದು ಹೋರಾಡೋಣ. ನಾನು ಮತ್ತೆ ಅಧಿವೇಶನದಲ್ಲಿ ಹೋರಾಟ ಮಾಡುತ್ತೇನೆ ಎಂದರು. ವಕೀಲ ಆರ್. ಜಿ. ನಾಯ್ಕ
ಕೆಡಿಸಿಸಿ ಬ್ಯಾಂಕ್ ನಿದೇರ್ಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿದರು. ಪಾದಯಾತ್ರೆಯಲ್ಲಿ ರಾಜ್ಯ ಅನ್ನದಾತ ರೈತ ಸಂಘದ ಅಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿ ಯ ಅಧ್ಯಕ್ಷ ಉಮೇಶ ಹರಿಕಾಂತ ಸೇರಿದಂತೆ ಸಾವಿರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.