ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ನಡೆದ ಅಪಘಾತದಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಗ್ಯಾನೇಶ್ ಕುಮಾರ್ ಅವರ ತಂದೆ ಗಾಯಗೊಂಡಿದ್ದಾರೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡು ತಂದೆ ಆಸ್ಪತ್ರೆ ದಾಖಲಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಸಿಇಸಿ ಗ್ಯಾನೇಶ್ ಕುಮಾರ್ ತಮ್ಮ ಒಡಿಶಾ ಪ್ರವಾಸ ಅಂತ್ಯಗೊಳಿಸಿ ದೆಹಲಿಗೆ ಮರಳಿದ್ದಾರೆ.
ಒಡಿಶಾದಲ್ಲಿ 700 ಬಿಎಲ್ಒ ಜೊತೆ ಇಂದು ಸಭೆ ನಿಗದಿಪಡಿಸಿದ್ದರು. ಈ ಸಭೆಯನ್ನು ರದ್ದುಗೊಳಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಗ್ಯಾನೇಶ್ ಕುಮಾರ್ 3 ದಿನಗಳ ಒಡಿಶಾ ಪ್ರವಾಸ ಕೈಗೊಂಡಿದ್ದರು.
ಗ್ಯಾನೇಶ್ ಕುಮಾರ್ ತಂದೆ ಸದ್ಯದ ಸ್ಥಿತಿ, ಗಾಯದ ಪ್ರಮಾಣದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಗಂಭೀರವಾಗಿ ಗಾಯಗೊಂಡಿರುವ ಕಾರಣ ಗ್ಯಾನೇಶ್ ಕುಮಾರ್ ಒಡಿಶಾ ಅಧಿಕೃತ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ಮರಳಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ಭುವೇಶ್ವರದಲ್ಲಿ 700 ಬಿಎಲ್ಒ (ಬೂತ್ ಲೆವಲ್ ಆಫೀಸರ್) ಜೊತೆ ಮಹತ್ವದ ಸಭೆ ಆಯೋಜಿಸಿದ್ದರು. ತುರ್ತು ಕಾರಣದಿಂದ ಪ್ರವಾಸ, ಸಭೆ ಮೊಟಕುಗೊಳಿಸಿ ಮರಳುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ತುರ್ತು ಕಾಣದಿಂದ ಮರಳುತ್ತಿದ್ದೇನೆ. ಒಡಿಶಾ ಜನರ ಪ್ರೀತಿ, ಇಲ್ಲಿನ ಆತಿಥ್ಯ, ವೈಭವದ ಸಂಸ್ಕೃತಿಗೆ ಮನಸೋತಿದ್ದೇನೆ. ಚುನಾವಣೆಯಲ್ಲಿ ಬಿಎಲ್ಒ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಅವರ ಜೊತೆ ಸಭೆ ನಡೆಸಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಒಡಿಶಾಗೆ ಪ್ರವಾಸ ಮಾಡುತ್ತೇನೆ ಎಂದು ಗ್ಯಾನೇಶ್ ಕುಮಾರ್ ಹೇಳಿದ್ದಾರೆ.

