March 23, 2026
Monday, March 23, 2026
spot_img

ಸಂಬಂಧಿಕರ ಮನೆಗೆ ಬಂದಿದ್ದವರ ಬಾಳಲ್ಲಿ ವಿಧಿ ಆಟ: ಈಜಲು ಹೋದವರು ನೀರು ಪಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಸಮೀಪದ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಮೃತರನ್ನು ಕೊಡಗು ಜಿಲ್ಲೆಯ ಮೂಲದ ಅಭಿಷೇಕ್ (27) ಮತ್ತು ಯೋಗೀಶ್ (17) ಎಂದು ಗುರುತಿಸಲಾಗಿದೆ. ಮೃತ ಅಭಿಷೇಕ್ ಅವರ ಅಕ್ಕ ಕಳಸದ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಭೇಟಿ ಮಾಡಲು ಇಬ್ಬರೂ ಕೊಡಗಿನಿಂದ ಆಗಮಿಸಿದ್ದರು. ಇಂದು ಸಂಜೆ ಭದ್ರಾ ನದಿಯಲ್ಲಿ ಈಜಲು ಹೋದ ಸಂದರ್ಭದಲ್ಲಿ ನೀರಿನ ಆಳದ ಅರಿವಿಲ್ಲದೆ ಇಬ್ಬರೂ ಮುಳುಗಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದ ತಕ್ಷಣ ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜು ತಜ್ಞರ ನೆರವಿನೊಂದಿಗೆ ಮೃತದೇಹಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಆದರೆ, ಕತ್ತಲಾದ ಹಿನ್ನೆಲೆಯಲ್ಲಿ ಇಂದಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ನಾಳೆ ಬೆಳಿಗ್ಗೆ ಮತ್ತೆ ಶೋಧ ಮುಂದುವರಿಯಲಿದೆ.

ನೆಚ್ಚಿನ ಯುವಕರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !