ಹೊಸದಿಗಂತ ಡಿಜಿಟಲ್ ಡೆಸ್ಕ್:
ಊರಿನ ಹೊರಗಿನ ಆ ತೋಟದ ಮನೆಯಲ್ಲಿ ಅಪ್ಪ-ಅಮ್ಮ ಹಾಗೂ ಇಬ್ಬರು ಮಕ್ಕಳಿದ್ದ ಮನೆಯಲ್ಲಿ ಈಗ ಮೌನ ಆವರಿಸಿದೆ. ಹಂತಕರ ಕ್ರೌರ್ಯಕ್ಕೆ ಮನೆಯ ಯಜಮಾನ ಬಲಿಯಾಗಿದ್ದು, ಇಡೀ ಜಿಲ್ಲೆಯೇ ಬೆಚ್ಚಿಬೀಳುವಂತಾಗಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಕೆಂಕೆರೆ ನಿವಾಸಿ ಮಂಜುನಾಥ್ ಕೊಲೆಯಾದ ದುರ್ದೈವಿ. ಎಂದಿನಂತೆ ನಿನ್ನೆ ರಾತ್ರಿ ಮಂಜುನಾಥ್ ತಮ್ಮಿಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯ ಹೊರಗೆ ಕುಳಿತು ಹರಟೆ ಹೊಡೆಯುತ್ತಿದ್ದರು. ಇದೇ ವೇಳೆ ಹೊಂಚು ಹಾಕಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳ ಗುಂಪು ಏಕಾಏಕಿ ದಾಳಿ ನಡೆಸಿದೆ.
ದಾಳಿಯನ್ನು ಕಂಡು ಭಯಭೀತಳಾದ ಓರ್ವ ಮಗಳು ಮನೆಯೊಳಗೆ ಓಡಿ ಪ್ರಾಣ ಉಳಿಸಿಕೊಂಡರೆ, ಮತ್ತೊಬ್ಬ ಮಗಳನ್ನು ಹಿಡಿದ ಹಂತಕರು ಆಕೆ ಕಿರುಚದಂತೆ ಬಾಯಿ ಮುಚ್ಚಿ ಹಿಡಿದಿದ್ದಾರೆ. ಬಳಿಕ ಮಂಜುನಾಥ್ ಅವರ ಎದೆ ಹಾಗೂ ದೇಹದ ಇತರ ಭಾಗಗಳಿಗೆ ಮನಸೋಇಚ್ಛೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ತಂದೆಯನ್ನು ಕಂಡು ಮಗಳು ತಾಯಿಗೆ ವಿಷಯ ತಿಳಿಸಿದ್ದಾಳೆ. ಆದರೆ ಅಷ್ಟರಲ್ಲೇ ಮಂಜುನಾಥ್ ಪ್ರಾಣಪಕ್ಷಿ ಹಾರಿಹೋಗಿತ್ತು.
ಹಂತಕರು ಬಹಳ ಯೋಜಿತವಾಗಿ ಈ ಕೃತ್ಯ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಗುರುತು ಸಿಗದಂತೆ ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಧರಿಸಿ ಬಂದಿದ್ದರು. ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಹಳೆಯ ದ್ವೇಷವೇ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಈ ಹತ್ಯೆ ನಡೆದಿದೆಯೇ ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.



