January21, 2026
Wednesday, January 21, 2026
spot_img

ತೆಲಂಗಾಣದಲ್ಲಿ ಅಪ್ಪ-ಮಗಳ ಜಿದ್ದಾಜಿದ್ದಿ: KCR ಗೆ ಠಕ್ಕರ್ ಕೊಡಲು ಹೊಸ ಪಕ್ಷ ಘೋಷಿಸಿದ ಕವಿತಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ (KCR) ಪುತ್ರಿ ಮಾಜಿ ಸಂಸದೆ ಕೆ. ಕವಿತಾ ಭಾರತ ರಾಷ್ಟ್ರ ಸಮಿತಿ (BRS)ಯಿಂದ ಅಮಾನತುಗೊಂಡ ಬೆನ್ನಲ್ಲೇ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದಿದ್ದರು.

ಇದೀಗ ಕವಿತಾ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಲು ಮುಂದಾಗಿದ್ದು, ಹೊಸ ಪಾರ್ಟಿ ಹುಟ್ಟು ಹಾಕುವುದಾಗಿ ಘೋಷಿಸಿದ್ದಾರೆ.

ಕವಿತಾ ತಮ್ಮ ಸಾಮಾಜಿಕ ಸಂಸ್ಥೆ ತೆಲಂಗಾಣ ಜಾಗೃತಿಯನ್ನು ರಾಜಕೀಯ ಪಕ್ಷವನ್ನಾಗಿಸಿ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

‘2029ರಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ಜಾಗೃತಿ ಪಕ್ಷ ಸ್ಪರ್ಧಿಸಲಿದೆ. ಪಕ್ಷದ ಹೆಸರು ಇನ್ನೂ ಅಂತಿಮಗೊಂಡಿಲ್ಲ’ ಎಂದು ಕವಿತಾ ಹೇಳಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪಿಸಿ ಕವಿತಾ ಅವರನ್ನು ಚಂದ್ರಶೇಖರ್‌ ರಾವ್‌ ಬಿಆರ್‌ಎಸ್‌ನಿಂದ ಅಮಾನತುಗೊಳಿಸಿದ್ದರು.

ಹೊಸ ಪಕ್ಷ ಘೋಷಣೆ
ಜೋಗುಳಾಂಬ ಗಡ್ವಾಲ್‌ ಜಿಲ್ಲೆಗೆ ಭೇಟಿ ನೀಡಿದ ಕವಿತಾ, ಹೊಸ ಪಕ್ಷ ಜನರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ ಮತ್ತು ತೆಲಂಗಾಣದ ಸಂಸ್ಕೃತಿಯನ್ನು ಕಾಪಾಡುತ್ತದೆ ಎಂದು ಹೇಳಿದ್ದಾರೆ. ತಮ್ಮ ʼಮನ ಊರು-ಮನ ಎಂಪಿʼ (ನಮ್ಮ ಊರು-ನಮ್ಮ ಎಂಪಿ) ಕಾರ್ಯಕ್ರಮವನ್ನು ಉಲ್ಲೇಖಿಸಿದ ಅವರು ತಾವು ಜನ ಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ತಿಳಿಸಿದ್ದಾರೆ. ಬಿಆರ್‌ಎಸ್‌ ಒಳಗಿನ ಆಂತರಿಕ ಕಚ್ಚಾಟದಿಂದ ತಾವು 2019ರ ಚುನಾವಣೆಯಲ್ಲಿ ಪರಾಭವ ಹೊಂದಿದ್ದಾಗಿ ಹೇಳಿದ್ದಾರೆ.

ಈ ಮಧ್ಯೆ ಕವಿತಾ ತಾವು ಯಾವು ಕಾರಣಕ್ಕೂ ತಂದೆಯ ಬಿಆರ್‌ಎಸ್‌ ಪಕ್ಷಕ್ಕೆ ಮರಳುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ತಮ್ಮ ಇಚ್ಛೆಗೆ ವಿರುದ್ಧವಾಗಿ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲಾಗಿತ್ತು. ಇದರಿಂದ ಮನಸ್ಸಿಗೆ ನೋವಾಗಿರುವುದಾಗಿ ವಿವರಿಸಿದ್ದಾರೆ. 2029ರ ವಿಧಾನಸಭಾ ಚುನಾವಣೆಯತ್ತ ಸಂಪೂರ್ಣ ಗಮನ ಹರಿಸಿರುವುದಾಗಿ ತಿಳಿಸಿದ ಅವರು ರಾಜಕೀಯದಲ್ಲಿ ಹೊಸ ಛಾಪು ಮೂಡಿಸುವ ಭರವಸೆ ಹೊಂದಿದ್ದಾರೆ.

Must Read