ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುರ್ಜಾಪುರ ಬ್ಯಾರೇಜ್ ಬಳಿ ಪತ್ನಿಯೇ ನದಿಗೆ ತಳ್ಳಿದ್ದಾಳೆ ಎಂದು ಹೇಳಿದ್ದ ತಾತಪ್ಪಗೆ ಇದೀಗ ದೊಡ್ಡ ಸಂಕಷ್ಟ ಎದುರಾಗಿದೆ. ತನ್ನ ಪತ್ನಿ ಅಪ್ರಾಪ್ತೆಯಾಗಿರುವುದರಿಂದ ತಾತಪ್ಪ ಸೇರಿದಂತೆ 10 ಮಂದಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ತಾತಪ್ಪನ ಬಂಧನ ಯಾವ ಕ್ಷಣದಲ್ಲಾದರೂ ಸಂಭವಿಸಬಹುದು.
ಅಪ್ರಾಪ್ತೆಯೇ ಪತ್ನಿಯಾಗಿರುವ ಬಗ್ಗೆ ಸತ್ಯ ಬಯಲಾಗುತ್ತಿದ್ದಂತೆ ಪ್ರಕರಣ ಹೊಸ ತಿರುವು ಪಡೆದಿದೆ. ಪತ್ನಿ ಬಾಲ್ಯ ವಿವಾಹದ ಬಗ್ಗೆ ನೀಡಿದ ಸ್ಪಷ್ಟ ಹೇಳಿಕೆಯು ತಾತಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲು ಕಾರಣವಾಗಿದೆ. ಮದುವೆಯ 11ನೇ ದಿನ ಫಸ್ಟ್ ನೈಟ್ ನಡೆದಿರುವುದಾಗಿ ಪತ್ನಿ ಹೇಳಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಮೂಲತಃ ಮಕ್ಕಳ ಹಕ್ಕುಗಳ ಆಯೋಗದ ಸೂಚನೆಯ ಮೇರೆಗೆ ಮೊದಲು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಮಾತ್ರ ಕೇಸು ದಾಖಲಿಸಲಾಗಿತ್ತು. ಆದರೆ ಪೋಕ್ಸೋ ಕಾಯಿದೆ ಅನ್ವಯಿಸಿಡಿದ್ದು ಇದೀಗ ಪೋಕ್ಸೋ ಸೆಕ್ಷನ್‌ಗಳನ್ನೂ ಸೇರಿಸಲಾಗಿದೆ.