ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೌಟುಂಬಿಕ ವೈಷಮ್ಯದ ಹಿನ್ನೆಲೆಯಲ್ಲಿ ತಂದೆಯನ್ನೇ ಮಗ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಗ್ರಾಮದಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, 60 ವರ್ಷದ ಸತೀಶ್ ಮೃತ ವ್ಯಕ್ತಿಯಾಗಿದ್ದು, 28 ವರ್ಷದ ರಂಜಿತ್ ಕೊಲೆ ಆರೋಪಿಯಾಗಿದ್ದಾನೆ.
ಸತೀಶ್ ಕುಟುಂಬದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ ಹಾಗೂ ಅವರ ಜೀವನಶೈಲಿಯಿಂದಾಗಿ ಮನೆ ಒಳಗಿನ ಕಲಹ ಹೆಚ್ಚಾಗಿತ್ತು ಎನ್ನಲಾಗಿದೆ. ಈ ಕಾರಣದಿಂದ ರಂಜಿತ್ ಹಾಗೂ ಆತನ ತಾಯಿ ನಿರ್ಮಲ ಅವರು ಕೆಲಕಾಲದಿಂದ ಕೆ.ಆರ್.ನಗರದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಇದನ್ನೂ ಓದಿ: FOOD | ಉತ್ತರ ಕರ್ನಾಟಕ ಶೈಲಿಯ ಸಜ್ಜಕದ ಹೋಳಿಗೆ ಎಂದಾದ್ರೂ ಟ್ರೈ ಮಾಡಿದ್ದೀರಾ?
ಇದೇ ವಿಷಯಕ್ಕೆ ಸಂಬಂಧಿಸಿ ತಂದೆ-ಮಗನ ನಡುವೆ ಆಗಾಗ್ಗೆ ಮಾತಿನ ಚಕಮಕಿ ನಡೆಯುತ್ತಿತ್ತು. ಶನಿವಾರ ರಾತ್ರಿ ಮತ್ತೆ ಜಗಳ ತೀವ್ರ ಸ್ವರೂಪ ಪಡೆದು, ಮಾತಿನ ತಕರಾರು ಹಿಂಸೆಗೆ ತಿರುಗಿದೆ. ಕೋಪದ ಆವೇಶದಲ್ಲಿ ರಂಜಿತ್ ಸ್ಟೀಲ್ ರಾಡ್ ಬಳಸಿ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಸತೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಸಾವೆ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರಂಜಿತ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

