ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 24 ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಅಪ್ಪ-ಮಗ ವಾಂಟೆಡ್ ಆಗಿದ್ದರು. ಒಂದು ವರ್ಷದಿಂದ ಬೆಂಗಳೂರಿನಲ್ಲಿ ಅಡಗಿದ್ದ ಮಣಿಕ್ ಸಿಂಗ್ ಹಾಗೂ ತಂದೆ ಮನೋಜ್ ಸಿಂಗ್‌ನನ್ನು ಬಂಧಿಸಲಾಗಿದೆ. ಬಿಹಾರದ ಸ್ಪೆಷಲ್ ಟಾಸ್ಕ್ ಫೋರ್ಸ್‌ನಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನ ರಾಜ್ಯ ಗುಪ್ತಚರ ಪೊಲೀಸ್ ಸಹಾಯದಿಂದ ಈ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರ ಬಳಿ ಇದ್ದ 8 ಡೊಂಗಲ್, 9 ಮೊಬೈಲ್ ಫೋನ್ ಮೂರು ಕೀಪ್ಯಾಡ್ ಫೋನ್ ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಅಪ್ಪ ಮಗ ಒಟ್ಟು 24 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರ ವಿರುದ್ಧ 40ಕ್ಕೂ ಹೆಚ್ಚು ಪ್ರಕರಣಗಳಿವೆ. ಇದರಲ್ಲಿ 2 ಡಜನ್‌ನಷ್ಟು ಡಬ್ಬಲ್ ಮರ್ಡರ್ ಕೇಸ್‌ಗಳಾಗಿದ್ದು, ಕೊಲೆ, ದರೋಡೆ, ಡಕಾಯಿತಿ, ಬೆದರಿಕೆ, ಹಫ್ತಾ ವಸೂಲಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಗಳ ಉಲ್ಲಂಘಿಸಿದ ಆರೋಪ ಇವರ ಮೇಲಿದೆ. ಇವರಿಬ್ಬರು ಪಾಟ್ನಾದ ನಿವಾಸಿಗಳಾಗಿದ್ದು, ಇವರ ವಿರುದ್ಧ ಬಿಹಾರ ಮಾತ್ರವಲ್ಲದೇ ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲೂ ಕೇಸುಗಳು ದಾಖಲಾಗಿವೆ.
ಆರೋಪಿಗಳಲ್ಲಿ ಓರ್ವನ ತಲೆಗೆ ಬಿಹಾರ ಪೊಲೀಸರು 3 ಲಕ್ಷ ಹಾಗೂ ಮತ್ತೊಬ್ಬನ ತಲೆಗೆ 1 ಲಕ್ಷ ಬಹುಮಾನ ಘೋಷಿಸಿದ್ದರು. ಮಣಿಕ್ ಕಳೆದೊಂದು ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ, ಆತನ ತಂದೆ ಮನೋಜ್ ಸಿಂಗ್ ಸಾಂದರ್ಭಿಕವಾಗಿ ಭೇಟಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.



