February 4, 2026
Wednesday, February 4, 2026
spot_img

ಆರ್ಥಿಕ ಹೊಡೆತದ ಭೀತಿ: ಭಾರತದ ವಿರುದ್ಧ ಪಾಕ್ ಕಣಕ್ಕಿಳಿಯದಿದ್ದರೆ ಕಠಿಣ ಕ್ರಮ ಗ್ಯಾರಂಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದ್ದು, ಇದು ಕ್ರಿಕೆಟ್ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ ಎಂಬ ಪ್ರಶ್ನೆಗೆ ಉತ್ತರ ‘ಹೌದು’ ಎಂದಿದ್ದರೂ, ಇದರ ಪರಿಣಾಮಗಳು ಈ ಬಾರಿ ಗಂಭೀರವಾಗಿರುವ ಸಾಧ್ಯತೆಯಿದೆ.

ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಗಳು ಬಹಿಷ್ಕಾರಕ್ಕೊಳಗಾಗಿರುವುದು ಇದೇ ಮೊದಲೇನಲ್ಲ. ಹಿಂದೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಬೇರೆ ಬೇರೆ ಕಾರಣಗಳಿಗಾಗಿ ಪಂದ್ಯವಾಡಲು ನಿರಾಕರಿಸಿದ್ದವು. ಈ ಹಿಂದೆ ಇಂತಹ ನಿರ್ಧಾರ ತೆಗೆದುಕೊಂಡ ತಂಡಗಳ ವಿರುದ್ಧ ಐಸಿಸಿ ಯಾವುದೇ ಕಠಿಣ ಕ್ರಮಗಳನ್ನು ಕೈಗೊಂಡಿರಲಿಲ್ಲ. ಇದೇ ಹಳೆಯ ಇತಿಹಾಸವನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ಈಗ ಹಠಕ್ಕೆ ಬಿದ್ದಂತಿದೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವೆಂದರೆ ಅದು ಕೇವಲ ಆಟವಲ್ಲ, ಅದೊಂದು ದೊಡ್ಡ ಆರ್ಥಿಕ ಮಾರುಕಟ್ಟೆ. ಈ ಪಂದ್ಯ ನಡೆಯದೇ ಇದ್ದರೆ ಐಸಿಸಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಲಿದೆ. ಹೀಗಾಗಿ, ಹಿಂದಿನ ಉದಾಹರಣೆಗಳನ್ನು ನೋಡಿ ಸುಮ್ಮನಿರಲು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಿದ್ಧವಿಲ್ಲ.

ಇದನ್ನೂ ಓದಿ:

ಫೆಬ್ರವರಿ 15ರಂದು ನಡೆಯಲಿರುವ ಭಾರತದ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನ ಗೈರಾದರೆ, ಈ ಬಾರಿ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಪಿಸಿಬಿಗೆ ಎಚ್ಚರಿಕೆ ನೀಡಲಾಗಿದ್ದು, ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ಸೂಚಿಸಲಾಗಿದೆ. ಒಂದು ವೇಳೆ ಪಾಕಿಸ್ತಾನ ತನ್ನ ಪಟ್ಟನ್ನು ಸಡಿಲಿಸದಿದ್ದರೆ, ಐಸಿಸಿ ಈ ಬಾರಿ ಶಿಸ್ತುಕ್ರಮದ ಮೂಲಕ ಬಿಸಿ ಮುಟ್ಟಿಸುವುದು ಖಚಿತ ಎನ್ನಲಾಗುತ್ತಿದೆ.

ಪಾಕಿಸ್ತಾನ ಈ ಆರ್ಥಿಕ ಮತ್ತು ಕ್ರೀಡಾ ಒತ್ತಡಕ್ಕೆ ಮಣಿಯುತ್ತದೆಯೇ ಅಥವಾ ತನ್ನ ಬಹಿಷ್ಕಾರದ ನಿರ್ಧಾರಕ್ಕೆ ಅಂಟಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !