ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯು ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಈ ಸಂಘರ್ಷದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಹಲವಾರು ವಿಮಾನಯಾನ ಸಂಸ್ಥೆಗಳು ತಮ್ಮ ಹಾರಾಟವನ್ನು ರದ್ದುಗೊಳಿಸಿವೆ. ಇದರ ಪರಿಣಾಮವಾಗಿ, ಪ್ರವಾಸಿ ತಾಣವಾದ ದುಬೈನಲ್ಲಿ ನೂರಾರು ವಿದೇಶಿ ಪ್ರವಾಸಿಗರು ತಾಯ್ನಾಡಿಗೆ ಮರಳಲಾಗದೆ ಅಸಹಾಯಕರಾಗಿ ಸಿಲುಕಿಕೊಂಡಿದ್ದಾರೆ.
ಈ ಹಿಂದೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರ ಪಾಲಿಗೆ ಸಂಜೀವಿನಿಯಾಗಿದ್ದ ನಟ ಸೋನು ಸೂದ್, ಈಗ ಅಂತರಾಷ್ಟ್ರೀಯ ಮಟ್ಟದ ಬಿಕ್ಕಟ್ಟಿನಲ್ಲೂ ಜನರ ನೆರವಿಗೆ ಧಾವಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ದುಬೈನಲ್ಲಿ ಸಿಲುಕಿರುವ ಪ್ರವಾಸಿಗರಿಗೆ ಉಚಿತವಾಗಿ ವಸತಿ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿದ್ದಾರೆ.
ಸೋನು ಸೂದ್ ಅವರ ಈ ನೆರವು ಕೇವಲ ಭಾರತೀಯರಿಗೆ ಮಾತ್ರ ಸೀಮಿತವಾಗಿಲ್ಲ. ಸಂಕಷ್ಟದಲ್ಲಿರುವ ಯಾವುದೇ ರಾಷ್ಟ್ರದ ಪ್ರವಾಸಿಗರು ಈ ಸೌಲಭ್ಯ ಪಡೆಯಬಹುದು.
ಸೋನು ಸೂದ್ ಅವರು ‘ದುಗಾಸ್ತ ಪ್ರಾಪರ್ಟೀಸ್’ ಸಂಸ್ಥೆಯೊಂದಿಗೆ ಕೈಜೋಡಿಸಿ ಈ ವ್ಯವಸ್ಥೆ ಮಾಡಿದ್ದಾರೆ. ಸಂಕಷ್ಟದಲ್ಲಿರುವವರು ನೇರವಾಗಿ ಸೋನು ಸೂದ್ ಅಥವಾ ದುಗಾಸ್ತ ಪ್ರಾಪರ್ಟೀಸ್ ಸಂಸ್ಥೆಗೆ ಸಂದೇಶ ಕಳುಹಿಸುವ ಮೂಲಕ ಸಹಾಯ ಕೋರಬಹುದು.
“ನೀವು ಸುರಕ್ಷಿತವಾಗಿ ನಿಮ್ಮ ತಾಯ್ನಾಡಿಗೆ ಮರಳುವವರೆಗೆ ನಿಮ್ಮ ವಾಸ್ತವ್ಯದ ಜವಾಬ್ದಾರಿ ನಮ್ಮದು,” ಎಂದು ಸೋನು ಸೂದ್ ಭರವಸೆ ನೀಡಿದ್ದಾರೆ.
ಈ ಉದಾತ್ತ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು ಅವರನ್ನು “ರಿಯಲ್ ಲೈಫ್ ಸೂಪರ್ ಸ್ಟಾರ್” ಎಂದು ಬಣ್ಣಿಸುತ್ತಿದ್ದಾರೆ.



